ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರದ ಸಚಿವಾಲಯದ ಧರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಮತ್ತು ಪ್ರಧಾನ ಮಂತ್ರಿ ಜನಜಾತೀಯ ಉನ್ನತ ಗ್ರಾಮ ಅಭಿಯಾನದ ಅಧೀನದಲ್ಲಿ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ ದರ್ಶನ ಯೋಜನೆಯ ಉಪಯೋಜನೆಯಾಗಿ ಆದಿವಾಸಿ ಪ್ರದೇಶಗಳಲ್ಲಿ ಹೋಂಸ್ಟೇ ಅಭಿವೃದ್ಧಿಗೆ ಸಹಾಯಧನ ನೀಡಲಾಗುತ್ತಿದೆ.
ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ನೆಮ್ಮಾರು ಗ್ರಾಮ ಪಂಚಾಯಿತಿಯ ಮಲನಾಡು ಗ್ರಾಮ, ಕೊಪ್ಪ ತಾಲ್ಲೂಕಿನ ಗುಡ್ಡೆ ತೋಟ ಗ್ರಾಮ ಪಂಚಾಯಿತಿಯ ಮೇಗೂರು ಗ್ರಾಮ, ಅಜ್ಜಂಪುರ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯಿತಿಯ, ಭೂತನಕಾಡು ಗ್ರಾಮಗಳನ್ನು ಗುರುತಿಸಲಾಗಿದ್ದು, ಈ ಗ್ರಾಮಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೋಂಸ್ಟೇ ನಿರ್ಮಿಸಲು ರೂ.೫ ಲಕ್ಷ, ನವೀಕರಿಸಲು ರೂ. ೩ ಲಕ್ಷ ಸಹಾಯಧನ ನೀಡುವ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿದ್ದು,
ಬುಡಕಟ್ಟು ಸಮುದಾಯವಿರುವ ಗ್ರಾಮಗಳಲ್ಲಿ ಆತಿಥ್ಯ ಕ್ಷೇತ್ರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಬುಡಕಟ್ಟು ಸಮುದಾಯದ ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪತ್ತನ್ನು ಪ್ರವಾಸಿಗರಿಗೆ ಪರಿಚಯಿಸುವುದಾಗಿದೆ. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳ ಬುಡಕಟ್ಟು ಜನಾಂಗದವರು ಈ ಯೋಜನೆಯನ್ನು ಉಪಯೋಗಿಸಿಕೊಳ್ಳಲು ಅರ್ಹ ಆಸಕ್ತ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆಯನ್ನು ಜಿಲ್ಲಾ ಪ್ರವಾಸೋದ್ಯಮ ಕಚೇರಿಯಲ್ಲಿ ಪಡೆದು ಅವಶ್ಯಕ ದಾಖಲೆಗಳಾದ ಜಾತಿ ಪ್ರಮಾಣ ಪತ್ರ (ಪರಿಶಿ? ಪಂಗಡ), ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್, ಮನೆಯ ದಾಖಲೆ, ಮನೆಯ ಪೋಟೋ, ಡಿಕ್ಲರೇಶನ್ ಫಾರ್ಮ್, ಗ್ರಾಮ ಪಂಚಾಯಿತಿಯ ಎನ್.ಒ.ಸಿ., ಪೋಲೀಸ್ ಇಲಾಖೆಯ ಎನ್.ಒ.ಸಿ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಆಗಸ್ಟ್ ೧೧ ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ (೦೮೨೬೨-೨೯೫೪೨೨, ೭೮೯೨೮೮೬೮೭೫) (ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರು)ಯನ್ನು ಕಚೇರಿಯ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subsidy for construction of homestays in tribal areas
Leave a comment