ಚಿಕ್ಕಮಗಳೂರು: ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು ೫ನೇ ತಾರೀಖಿನೊಳಗೆ ಪಡಿತರ ಹಂಚಿಕೆ ಮಾಡಬೇಕು. ಅನ್ನಭಾಗ್ಯ ಅಕ್ಕಿಯ ಕಮಿಷನ್ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿವಿಧ ಕಾರಣ ನೀಡಿ ಪಡಿತರವನ್ನು ಅಂಗಡಿ ಮಾಲೀಕರಿಗೆ ೧೫ನೇ ತಾರೀಖಿನಿಂದ ಎತ್ತುವಳಿ ನೀಡಲಾಗುತ್ತಿದೆ. ಇದರಿಂದ ಪಡಿತರದಾರರಿಗೆ ವಿತರಣೆ ಮಾಡುವುದು ತಡವಾಗುತ್ತಿದೆ ಎಂದು ತಿಳಿಸಿದರು.
ನಿತ್ಯ ಅಂಗಡಿ ಮುಂದೆ ಸರತಿ ಸಾಲು ಬೆಳೆಯುತ್ತದೆ. ಹೀಗಾಗಿ ಹಿಂದಿನ ಪದ್ದತಿಯಂತೆ ತಿಂಗಳ ೫ನೇ ತಾರೀಖಿನೊಳಗೆ ಪಡಿತರವನ್ನು ಎತ್ತುವಳಿ ಮಾಡಿಸಿದರೆ ವಿತರಣೆ ಮಾಡಲು ಅನುಕೂಲ ಆಗಲಿದೆ ಎಂದರು.
ಅಂಗಡಿ ಮಾಲೀಕರಿಗೆ ಬರಬೇಕಾದ ಅನ್ನಭಾಗ್ಯ ಅಕ್ಕಿಯ ಕಮಿಷನ್ ಹಣವನ್ನು ಆಯಾ ತಿಂಗಳಲ್ಲೇ ಪಾವತಿ ಮಾಡಬೇಕು. ಸುಮಾರು ೭ ವರ್ಷದಿಂದ ಇಕೆವೈಸಿ ಮಾಡಿರುವ ಹಣವೂ ಕೂಡ ಬಂದಿಲ್ಲ. ಪ್ರಸ್ತುತ ನ್ಯಾಯಬೆಲೆ ಅಂಗಡಿಗಳಿಗೆ ಬಿಲ್ಲಿಂಗ್ ಮಾಡಿದ ೨೪ ಗಂಟೆಗಳ ನಂತರ ಅಪ್‌ಡೇಟ್ ಆಗುತ್ತಿದೆ. ಕೂಡಲೇ ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಬಿಲ್ ಹಾಕಿದ ಕೂಡಲೇ ಪಡಿತರ ವಿತರಣೆಗೆ ಅವಕಾಶ ಮಾಡಿಕೊಡಬೇಕು ಎಂದರು.
ರಾಜ್ಯ ಸರಕಾರ ಮುಂದೆ ೫ ಕಿಲೋ ಅಕ್ಕಿ ಬದಲಿಗೆ ಆಹಾರ ಪದಾರ್ಥಗಳ ಕಿಟ್ ನೀಡಲು ಮುಂದಾಗಿದೆ. ಕಿಟ್ ನೀಡಲಿ. ಆದರೆ, ಅಕ್ಕಿ ನೀಡುವುದನ್ನು ನಿಲ್ಲಿಸಬಾರದು. ಕಿಟ್ಟನ್ನು ನಾವು ಖರೀದಿಸಿ ಪಡಿತರದಾರರಿಂದ ಹಣ ಪಡೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಅಕ್ಕಿ ಪೂರೈಕೆ ನಿಲ್ಲಿಸಬಾರದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಚನ್ನಕೇಶವೇಗೌಡ, ಬಸವರಾಜ್, ದೇವರಾಜ್, ಸಿದ್ದೇಗೌಡ, ಎಂ.ಎಸ್ ಮಂಟೆಸ್ವಾಮಿ ಉಪಸ್ಥಿತರಿದ್ದರು
State Ration Association demands adequate ration distribution
Leave a comment