ಚಿಕ್ಕಮಗಳೂರು : ದೇವಿರಮ್ಮ ಬೆಟ್ಟ ಹತ್ತಿ ದೇವರ ದರ್ಶನದ ವೇಳೆ ಕಾಲ್ ತುಳಿತ ಎಂಬ ಸುಳ್ಳು ಸುದ್ದಿ ಹಾಗೂ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಎಸ್ ಪಿ ವಿಕ್ರಂ ಅಮಟೆ ಸ್ಪಷ್ಟನೆ ನೀಡಿದ್ದಾರೆ.
3800 ಅಡಿ ಎತ್ತರದಲ್ಲಿರೋ ದೇವಿರಮ್ಮ ಬೆಟ್ಟದಲ್ಲಿ ತಾಯಿಯ ದರ್ಶನ ಪಡೆಯುತ್ತಿರುವ ವೇಳೆ ನೂರಾರು ಜನರು ಕಾಲ್ತುಳಿತಕ್ಕೆ ಒಳಪಟ್ಟು ಗಾಯಗೊಂಡಿದ್ದಾರೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರೋ ವಿಕ್ರಂ ಅಮಟೆ, ಇದು ಸತ್ಯಕ್ಕೆ ದೂರವಾದ ಮಾಹಿತಿ ಎಂದಿದ್ದಾರೆ. ಬೆಟ್ಟ ಹತ್ತುವಾಗ ಇಬ್ಬರು ಮಹಿಳೆಯರು ಮಾತ್ರ ಪ್ರಜ್ಞೆ ತಪ್ಪಿದ್ದರು. ಪ್ರಜ್ಞೆ ತಪ್ಪಿದವರನ್ನು ಆಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಆ ಇಬ್ಬರು ಮಹಿಳೆಯರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಈ ಮಹಿಳೆಯರು ಉಪವಾಸ ಇದ್ದು ಬೆಟ್ಟ ಹತ್ತುತ್ತಿದ್ದ ಕಾರಣ ಪ್ರಜ್ಞೆ ತಪ್ಪಿ ಅಸ್ವಸ್ಥರಾಗಿದ್ದರು. ಇನ್ನುಳಿದಂತೆ ಮೂವರಿಗೆ ಕಾಲು ಜಾರಿ ಟ್ವಿಸ್ಟ್ ಆಗಿ ಬಿದ್ದಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿದೆ. ಅವರುಗಳನ್ನು ಸಹ ಪೋಲಿಸ್ ರಕ್ಷಣಾ ತಂಡ ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸಿ ತಮ್ಮ ಮನೆ ಗಳಿಗೆ ಕಳುಹಿಸಿ ಕೊಟ್ಟಿದ್ದಾರೆ. ಆದರೆ ಕೆಲವು ಮಾಧ್ಯಮಗಳಲ್ಲಿ ಕಾಲ್ತುಳಿತ ಹಾಗೂ ಸಾವಿರಾರು ಜನರಿಗೆ ಗಾಯ ಎಂಬ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದು ಇದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಮಾಧ್ಯಮಗಳಿಗೆ ಮನವಿ ಮಾಡಿರುವ ಚಿಕ್ಕಮಗಳೂರು ಎಸ್ಪಿ ಡಾ ವಿಕ್ರಮ್ ಅಮಟೆ ಯಾವುದೇ ಮಾಹಿತಿಗಳು ಬೇಕಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿ ಕೇಳಿಕೊಂಡಿದ್ದಾರೆ.
Leave a comment