ಚಿಕ್ಕಮಗಳೂರು: ಚಿಕ್ಕಮಗಳೂರು ಕೆ.ಎಸ್.ಆರ್ ಟಿ.ಸಿ ಬಸ್ ನಿಲ್ದಾಣದಲ್ಲಿ ಹಗಲು ದರೋಡೆ ನಡೆಯುತ್ತಿದ್ದು ಮಹಿಳೆಯರಿಗೆ ಹಾಲುಣಿಸುವ ಕೊಠಡಿಯು ಇಲ್ಲದಂತಾಗಿದ್ದು, ಶೌಚಾಲಯ ನಿರ್ವಹಣೆಯಲ್ಲಿ ಅಕ್ರಮ ಎಸಗಿದ್ದು ಇದಕ್ಕೆಲ್ಲ ವಿಭಾಗಿಯ ನಿಯಂತ್ರಣ ಅಧಿಕಾರಿಯೇ ಕಾರಣ ಇವರಿಂದ ವರದಿ ಕೇಳಿರುವುದಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಪುಷ್ಪ ಅಮರನಾಥ್ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಪುಷ್ಪ ಅಮರನಾಥ್, ಚಿಕ್ಕಮಗಳೂರು ಕೆ.ಎಸ್.ಆರ್ ಟಿ.ಸಿ ಡಿಸಿ ಜಗದೀಶ್ ಬೇಜವಾಬ್ದಾರಿ ಹಾಗೂ ನಿರ್ಲಕ್ಷದಿಂದ ಬಸ್ ನಿಲ್ದಾಣ ಅವ್ಯವಹಾರಗಳ ಆಗರವಾಗಿದ್ದು ಇದನ್ನು ಸಹಿಸಲು ಸಾಧ್ಯವೇ ಇಲ್ಲ. ತಾಯಿ ಮಡಿಲು ಕೇಂದ್ರ ಗೋಡೌನ್ ಆಗಿ ಮಾರ್ಪಟ್ಟಿದ್ದು, ಮಹಿಳೆಯರ ಶೌಚಾಲಯಕ್ಕೆ ಹತ್ತು ರೂಪಾಯಿ ಪಡೆಯುತ್ತಾರೆ, ಅಲ್ಲಿ ನಾಮಫಲಕವನ್ನು ಕೂಡ ಅಳವಡಿಸಿಲ್ಲ. ಇದು ಅಪರಾಧವಾಗಿದ್ದು ಈ ಎಲ್ಲಾ ಕಾರ್ಯಗಳು ಡಿಸಿ ಅವರ ಮೂಗಿನ ನೇರಕ್ಕೆ ನಡೆಯುತ್ತಿದ್ದು, ಅವರನ್ನು ಅವರನ್ನು ವರ್ಗಾವಣೆಗೆ ಶಿಫಾರಸ್ಸು ಮಾಡುತ್ತೇನೆ ಎಂದರು.
ಮಂಗಳವಾರ ಬೆಳಗ್ಗೆ ಚಿಕ್ಕಮಗಳೂರು ನಗರದ ಸರ್ಕಾರಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಪುಷ್ಪ ಅಮರನಾಥ್ ಪ್ರಯಾಣಿಕರಿಗೆ ಶಕ್ತಿ ಯೋಜನೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ಮಹಿಳೆಯೊಬ್ಬರು ಆಧಾರ್ ಕಾರ್ಡ್ ಇಲ್ಲ ಎಂದಾಗ, ಗುರುತದ ಚೀಟಿ ಇಲ್ಲದೆಯೂ ಪ್ರಯಾಣಿಸಬಹುದು ಎಂದು ತಿಳಿಸಿರುವುದಾಗಿ ಮಾಹಿತಿ ನೀಡಿದರು. ಅಲ್ಲದೆ ನಿರ್ವಾಹಕರು ಮಹಿಳೆಯರ ಜೊತೆ ವರ್ತನೆ ಸರಿಗೊಳಿಸುವ ಕುರಿತು ಸೂಚನೆ ನೀಡಲಾಗಿದೆ. ಜೊತೆಗೆ ನಿರ್ವಾಹಕರ ಜೊತೆಗೆ ಒಂದು ದಿನದ ಶಿಬಿರ ಹಮ್ಮಿಕೊಂಡು ಹಲವು ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದರು.
ಇದೆ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಬಗ್ಗೆ ಜನರು ಮೆಚ್ಚುಗೆಯ ಮಾತುಗಳನ್ನು ಆಡಿದರು, ಆದರೆ ಅಧಿಕಾರಿಗಳ ಅಸಡ್ಡೆ ಹಾಗೂ ನಿರ್ಲಕ್ಷ ಧೋರಣೆಯಿಂದ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದರು. ಗ್ಯಾರಂಟಿ ಅನುಷ್ಠಾನ ಸಮಿತಿಯು ರಾಜ್ಯದಲ್ಲೆಡೆ ಸೈನ್ಯದಂತೆ ಕಾರ್ಯ ನಿರ್ವಹಿಸುತ್ತಿದೆ . ಜಿಲ್ಲಾ ಮಟ್ಟದ ತಂಡ ಕೂಡ ಸಕ್ರಿಯವಾಗಿದ್ದು, ಜನರಲ್ಲಿ ಅಡಗಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆಯಾಗಿದ್ದು, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದರು.
ಡಿಸೆಂಬರ್ 5ರ ಹಾಸನ ಸ್ವಾಭಿಮಾನಿ ಸಮಾವೇಶ ಮೂರೂ ಕ್ಷೇತ್ರಗಳ ಉಪಚುನಾವಣೆ ವಿಜಯೋತ್ಸವ ಆಗಿದ್ದು, ಗೆಲುವಿನ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಚಿಕ್ಕಮಗಳೂರಿನಿಂದ ಅತಿ ಹೆಚ್ಚು ಜನರು ಹಾಗೂ ಕಾರ್ಯಕರ್ತರು ಆಗಮಿಸಬೇಕೆಂದು ಅವರು ಮನವಿ ಮಾಡಿದರು.
Leave a comment