ಚಿಕ್ಕಮಗಳೂರು: ಇಲ್ಲಿನ ಪ್ರೊಟೆಸ್ಟಂಟ್ ಕ್ರೈಸ್ತರ ಅಭಿವೃದ್ಧಿಗೆ ಬಾಕಿ ಉಳಿದಿರುವ ೧೬೫ ಕೋಟಿ ರೂಗಳನ್ನು ಈ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ ಅಧ್ಯಕ್ಷ ಕೆ.ಕೆ. ವರ್ಗೀಸ್ ಮನವಿ ಮಾಡಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೨೫-೨೬ನೇ ಸಾಲಿನಲ್ಲಿ ಕೆಸಿಸಿಡಿಸಿಎಲ್ ಗೆ ೨೫೦ ಕೋಟಿ ರೂ ಘೋಷಿಸಿದ್ದು, ಈ ಪೈಕಿ ಕೇವಲ ೮೫ ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿದೆ. ಕ್ರೈಸ್ತ ಸಮುದಾಯದ ಜನಸಂಖ್ಯೆ ಮತ್ತು ಅಗತ್ಯಗಳನ್ನು ಪೂರೈಸಲು ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಕ್ರೈಸ್ತ ಸಮುದಾಯಗಳಿಗೆ ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಸಮಾಧಿ ಸ್ಥಳಗಳಿಗೆ ಜಾಗವನ್ನು ಮೀಸಲಿಡಬೇಕು, ರಾಜ್ಯಾದ್ಯಂತ ಕ್ರೈಸ್ತ ಸಮುದಾಯ ಭವನವನ್ನು ನಿರ್ಮಿಸಬೇಕು, ಪಾಸ್ಟರ್‌ಗಳಿಗೆ ಮುಜುರಾಯಿ ಇಲಾಖೆ ಅಡಿಯಲ್ಲಿ ಮಾಸಿಕ ಗೌರವಧನ ನೀಡಬೇಕು ಹಾಗೂ ಗುರುತಿನ ಚೀಟಿ ವಿತರಿಸುವಂತೆ ಆಗ್ರಹಿಸಿದರು.
ಪ್ರಸ್ತುತ ಅಲ್ಪಸಂಖ್ಯಾತರ ನಿರ್ದೇಶನಾಲಯ ನೀಡುತ್ತಿರುವ ವಿದ್ಯಾರ್ಥಿ ವೇತನಗಳು , ವಸತಿ ನಿಲಯಗಳು, ಶಿಕ್ಷಣ ಸಹಾಯ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಸಮುದಾಯ ಅಭಿವೃದ್ಧಿ ಯೋಜನೆಗಳು, ಉದ್ಯೋಗ ಮತ್ತು ಜೀವನೋಪಾಯ ಯೋಜನೆಗಳು ಸೇರಿದಂತೆ ಎಲ್ಲಾ ಯೋಜನೆಗಳನ್ನು ಕ್ರೈಸ್ತ ಸಮುದಾಯಕ್ಕೆ ವಿಸ್ತರಿಸಬೇಕೆಂದು ವಿನಂತಿಸಿದರು.
ಕ್ರೈಸ್ತರ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸಂರಕ್ಷಿಸಲು ಬೆಂಗಳೂರಿನಲ್ಲಿ ಕ್ರೈಸ್ತ ಪರಂಪರೆ ಸಂಗ್ರಹಾಲಯವನ್ನು ಸ್ಥಾಪಿಸಬೇಕು. ಕ್ರೈಸ್ತ ಅಧ್ಯಯನ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಉತ್ತೇಜಿಸುವ ಜೊತೆಗೆ ಯುವಕರಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಆರಂಭಿಸಬೇಕೆಂದು ಹೇಳಿದರು.
ಕ್ರೈಸ್ತರಿಗೆ ಪ್ರತ್ಯೇಕ ೨ಸಿ ವರ್ಗವನ್ನು ರಚಿಸಬೇಕು. ಹಿಂದಿನ ಸರ್ಕಾರ ಜಾರಿಗೆ ತಂದಿರುವ ಮತಾಂತರ ವಿರೋಧಿ ಕಾಯ್ದೆಯನ್ನು ರದ್ದುಪಡಿಸಿ ಧಾರ್ಮಿಕ ಸ್ವಾತಂತ್ರ್ಯ, ಸಾಮಾಜಿಕ ಸೌಹಾರ್ಧತೆಗೆ ಸಹಕರಿಸಬೇಕೆಂದು ವಿನಂತಿಸಿದರು.
ಕ್ರೈಸ್ತ ಸಂಸ್ಥೆಗಳನ್ನು ರಕ್ಷಣೆ ಮಾಡಬೇಕು, ಕ್ರೈಸ್ತ ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರ ನೆರವು ನೀಡುವ ಜೊತೆಗೆ ಯೆರೂಸಲೇಮ್ ಯಾತ್ರೆಗೆ ಕ್ರೈಸ್ತರಿಗೆ ಆರ್ಥಿಕ ನೆರವು ನೀಡಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರೈಸ್ತರ ಮಹಾಸಭಾ ಮುಖಂಡರುಗಳಾದ ಸುಂದರಬಾಬು, ರಮೇಶ್‌ಪ್ರಾನ್ಸಿಸ್, ಸುರೇಶ್‌ಜಾಕೋಬ್, ವಿ.ಪಿ. ರಂಗ ಉಪಸ್ಥಿತರಿದ್ದರು.
Protestant Christian Conference demands release of outstanding funds
Leave a comment