ಚಿಕ್ಕಮಗಳೂರು: ನಗರದ ರಾಮನಹಳ್ಳಿ ಬಡಾವಣೆಯ ಸರ್ವೆ ನಂ. ೧೧೫/೧ ರಲ್ಲಿ ಇರುವ ಪಾರ್ಕ್ ಜಾಗವನ್ನು ಅತಿಕ್ರಮಿಸಿರುವುದನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ನಗರಸಭೆ ಮತ್ತು ಸಿಡಿಎ ಎದುರು ಸಧ್ಯದಲ್ಲೇ ಉಗ್ರ ಪ್ರತಿಭಟನೆ ನಡೆಸುವುದಾಗಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಮ್ಮ ಕರವೇ ಜಿಲ್ಲಾಧ್ಯಕ್ಷ ಅಗ್ನಿ ಸುಮಂತ್ ಅವರು ರಾಮನಹಳ್ಳಿ ಬಡಾವಣೆಯ ಸರ್ವೆ ನಂ.೧೫೫/೧ ರಲ್ಲಿ ೨ ಎಕರೆ ೧೩ ಗುಂಟೆ ಜಾಗವನ್ನು ೧೯೮೬-೨೭ ರಲ್ಲಿ ಮಹದೇವಪ್ಪ ಎಂಬುವವರು ಮೀಸಲಿಟ್ಟಿದ್ದು, ೮೦x೨೦೦ ಅಡಿ ಜಾಗವನ್ನು ಪಾರ್ಕಿಗೆ ಕಾಯ್ದಿರಿಸಿ ಬಡಾವಣೆ ನಕ್ಷೆ ಅನುಮೋದನೆಯಾಗಿದೆ ಎಂದು ಹೇಳಿದರು.
ಲೇಔಟ್‌ನಲ್ಲಿ ಬಿಡಲಾಗಿದ್ದ ಉದ್ಯಾನವನದ ಈ ಜಾಗವನ್ನು ಕೆಲವು ಬಲಾಢ್ಯರು ನಗರಸಭೆ ಮತ್ತು ಸಿಡಿಎ ಅಧಿಕಾರಿಗಳೊಂದಿಗೆ ಶಾಮೀಲಾಗಿ ಮಾರ್ಪಾಡು ನಕ್ಷೆ ತಯಾರಿಸಿದ್ದಾರೆಂದು ಆರೋಪಿಸಿದರು.
ಈ ಸಂಬಂಧ ಸ್ಥಳೀಯ ನಗರಸಭೆ ಸದಸ್ಯರು, ನಗರಸಭಾಧ್ಯಕ್ಷರು ಮತ್ತು ಪೌರಾಯುಕ್ತರು, ಸಿಡಿಎ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ರಾಮನಹಳ್ಳಿ ಹನುಮಂತನಗರದ ಉದ್ಯಾನವನ ಜಾಗ ಅತಿಕ್ರಮಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಜಾಗವನ್ನು ಉಳಿಸುವಂತೆ ಆಗ್ರಹಿಸಿದರು.
ಇನ್ನೊಂದು ವಾರದಲ್ಲಿ ತೆರವು ಕಾರ್ಯಾಚರಣೆ ಆಗದಿದ್ದರೆ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಮುಖಂಡರಾದ ಪ್ರದೀಪ್, ಜೀವನ್, ಪ್ರಜ್ವಲ್, ಸುಭಾನ್, ಅಕ್ಷಯ್ ಉಪಸ್ಥಿತರಿದ್ದರು.
Protest demanding the clearing of park land
Leave a comment