ಚಿಕ್ಕಮಗಳೂರು : ಸೈಬರ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ತಾಂತ್ರಿಕತೆಯನ್ನು ಬಳಸಿಕೊಂಡು ಸಾರ್ವಜನಿಕರ ಹಣ ಲೂಟಿ ಮಾಡುವ ಸೈಬರ್ ವಂಚಕರ ಜಾಲಕ್ಕೆ ಹಲವರು ಬಲಿಯಾಗುತ್ತಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರದೀಪ್ ಹೊರಪೇಟೆ ಎಂಬುವವರು ತಮ್ಮ ಕಷ್ಟಾರ್ಜಿತ ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಇತ್ತೀಚೆಗೆ ತಮ್ಮ ಮೊಬೈಲ್ ಕಳೆದುಕೊಂಡಿದ್ದ ಪ್ರದೀಪ್ ನಿಯಮಾನುಸಾರ ‘ಇ-ಲಾಸ್ಟ್ ರಿಪೋರ್ಟ್’ ಪೋರ್ಟಲ್ನಲ್ಲಿ ದೂರು ದಾಖಲಿಸಿ ಅದೇ ನಂಬರ್ನ ಪರ್ಯಾಯ ಸಿಮ್ ಕಾರ್ಡ್ ಪಡೆದುಕೊಂಡಿದ್ದರು.
ಈ ನಡುವೆ ಸಿಮ್ ಸಕ್ರಿಯಗೊಂಡು ಎಸ್ಎಂಎಸ್ ಸೇವೆಗಳು ಪುನಾರಂಭಗೊಂಡ ಬೆನ್ನಲ್ಲೇ ವಂಚಕರು ತಮ್ಮ ಕೈಚಳಕ ತೋರಿಸಿದ್ದಾರೆ. ಕಳೆದುಹೋದ ಮೊಬೈಲ್ ಪತ್ತೆ ಹಚ್ಚಲು ಸರ್ಕಾರಿ ಪೋರ್ಟಲ್ ಆದ CEIR ನಲ್ಲಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದ ಪ್ರದೀಪ್ ಅವರಿಗೆ, ಮಾರ್ಚ್ 14 ರಂದು ಹೊಸ ಮೊಬೈಲ್ ಖರೀದಿಸಲು ಮುಂದಾದಾಗ ದೊಡ್ಡ ಆಘಾತ ಕಾಯುತ್ತಿತ್ತು.
ಆನ್ಲೈನ್ ಮೂಲಕ ಮೊಬೈಲ್ ಆರ್ಡರ್ ಮಾಡಲು ಪ್ರಯತ್ನಿಸಿದಾಗ ಅವರ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ ಎಂಬ ಸಂದೇಶ ಬಂದಿದೆ. ತಕ್ಷಣ ಖಾತೆಯನ್ನು ಪರಿಶೀಲಿಸಿದಾಗ, ಎಸ್ಬಿಐ ಖಾತೆಯಲ್ಲಿದ್ದ 1,03,923 ರೂಪಾಯಿಗಳ ಪೈಕಿ ಬರೋಬ್ಬರಿ 94,050 ರೂಪಾಯಿಗಳು ಮಾಯವಾಗಿ ಕೇವಲ 9,873 ರೂಪಾಯಿಗಳು ಮಾತ್ರ ಬಾಕಿ ಉಳಿದಿತ್ತು.
ತಕ್ಷಣವೇ ಎಚ್ಚೆತ್ತ ಪ್ರದೀಪ್ ಅವರು ಬ್ಯಾಂಕ್ ಗ್ರಾಹಕ ಸೇವೆಗೆ ಕರೆ ಮಾಡಿ ತಮ್ಮ ಖಾತೆಯ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ (Block), ಮೊಬೈಲ್ ಕಳೆದುಹೋದ ಸಂದರ್ಭವನ್ನು ಬಳಸಿಕೊಂಡು ವಂಚಕರು ಅವರ ಬ್ಯಾಂಕಿಂಗ್ ವಿವರಗಳನ್ನು ಲೂಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಅಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸೈಬರ್ ಕ್ರೈಂ ವಿಭಾಗದ ನೆರವಿನೊಂದಿಗೆ ಹಣ ವರ್ಗಾವಣೆಯಾದ ಮೂಲವನ್ನು ಪತ್ತೆ ಹಚ್ಚುತ್ತಿದ್ದಾರೆ. ಡಿಜಿಟಲ್ ಯುಗದಲ್ಲಿ ಮೊಬೈಲ್ ಕಳೆದುಕೊಂಡಾಗ ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಈ ಪ್ರಕರಣ ಒಂದು ಎಚ್ಚರಿಕೆಯ ಗಂಟೆಯಾಗಿದೆ.
Pradeep from Allur cheated in cyber fraudsters’ network
Leave a comment