Home namma chikmagalur chikamagalur ಪೊಲೀಸ್ ಸೇವೆ ಎಂದರೆ ಅದು ಸಮಾಜದ ಭರವಸೆ
chikamagalurHomeLatest Newsnamma chikmagalur

ಪೊಲೀಸ್ ಸೇವೆ ಎಂದರೆ ಅದು ಸಮಾಜದ ಭರವಸೆ

Share
Share

ಚಿಕ್ಕಮಗಳೂರು: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವುದು ನನ್ನ ಪೂರ್ವಜನ್ಮದ ಪುಣ್ಯ. ಪೊಲೀಸ್ ಎಂದರೆ ಕೇವಲ ಬಂದೂಕು ಹಿಡಿದು ನಿಲ್ಲುವುದಲ್ಲ, ಅದು ಸಮಾಜದ ಶಾಂತಿ, ಸುವ್ಯವಸ್ಥೆ ಮತ್ತು ಸುರಕ್ಷತೆಯ ಭರವಸೆಯಾಗಿದೆ ಎಂದು ನಿವೃತ್ತ ಎ.ಆರ್.ಎಸ್.ಐ. ತೌಫಿಕ್ ಅಹಮದ್ ಅಭಿಪ್ರಾಯಪಟ್ಟರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ತಮ್ಮ ೩೬ ವರ್ಷಗಳ ಸುದೀರ್ಘ ಸೇವೆಯನ್ನು ಸ್ಮರಿಸಿದ ತೌಫಿಕ್ ಅಹಮದ್, ೧೯೮೯ರಲ್ಲಿ ಪೊಲೀಸ್ ಇಲಾಖೆ ಸೇರಿದ ನನಗೆ ಈ ವೃತ್ತಿ ಬದುಕಿನ ಉದ್ದಕ್ಕೂ ಶಿಸ್ತು, ಸಮಯ ಪಾಲನೆ, ವ್ಯಕ್ತಿತ್ವ ವಿಕಸನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಾಳ್ಮೆಯನ್ನು ಕಲಿಸಿಕೊಟ್ಟಿದೆ. ಇಲಾಖೆಯು ನನ್ನ ಜೀವನ ಶೈಲಿಯನ್ನೇ ಬದಲಿಸಿತು ಎಂದರು.

೧೯೬೫ರ ಏಪ್ರಿಲ್ ೨ರಂದು ಕರ್ನಾಟಕ ಪೊಲೀಸ್ ಕಾಯ್ದೆಯಡಿ ನಮ್ಮ ರಾಜ್ಯ ಪೊಲೀಸ್ ಪಡೆಗೆ ಅಧಿಕೃತ ಧ್ವಜ ಲಭಿಸಿತು. ಇದು ಕೇವಲ ಒಂದು ಆಚರಣೆಯಲ್ಲ, ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸುವ ದಿನವಾಗಿದೆ. ಹಬ್ಬ ಹರಿದಿನಗಳಿರಲಿ ಅಥವಾ ಕೋವಿಡ್‌ನಂತಹ ಕಠಿಣ ಸಮಯವಿರಲಿ, ಪೊಲೀಸರು ತಮ್ಮ ಕುಟುಂಬವನ್ನು ಮರೆತು ಸಾರ್ವಜನಿಕ ಸೇವೆಗೆ ಬದ್ಧರಾಗಿರುತ್ತಾರೆ. ಇಂದು ಸೈಬರ್ ಅಪರಾಧಗಳಂತಹ ಆಧುನಿಕ ಸವಾಲುಗಳನ್ನು ಎದುರಿಸಲು ನಮ್ಮ ಪಡೆ ತಂತ್ರಜ್ಞಾನದೊಂದಿಗೆ ಸಜ್ಜಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ತಮ್ಮ ವೃತ್ತಿ ಜೀವನದಲ್ಲಿ ಸುಮಾರು ೧೪ ಪೊಲೀಸ್ ವರಿಷ್ಠಾಧಿಕಾರಿಗಳ ವಾಹನ ಚಾಲಕರಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹಂಚಿಕೊಂಡ ಅವರು, ತಮ್ಮ ತಂದೆ ಇಬ್ರಾಹಿಂ ಕಲೀಲ್ ಅವರು ಕೂಡ ಆರ್.ಎಸ್.ಐ. ಆಗಿ ನಿವೃತ್ತರಾಗಿದ್ದು, ತಮ್ಮ ಕುಟುಂಬದ ಹಲವರು ಪೊಲೀಸ್ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮಾತನಾಡಿ, ಸಾರ್ವಜನಿಕರ ರಕ್ಷಣೆಗಾಗಿ ಪೊಲೀಸರು ದಿನದ ೨೪ ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿರುವುದರಿಂದಲೇ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ. ಅವರ ನಿಸ್ವಾರ್ಥ ಸೇವೆ ಹಾಗೂ ಶ್ರಮ ಶ್ಲಾಘನೀಯ ಎಂದರು.

೧೯೬೫ರ ಏಪ್ರಿಲ್ ೨ ರಂದು ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಗೆ ಬಂದ ಸವಿನೆನಪಿಗಾಗಿ ಹಾಗೂ ಸ್ವತಂತ್ರ ಪೊಲೀಸ್ ಪಡೆ ರಚನೆಯಾದ ಗುರುತಿಗಾಗಿ ಕಳೆದ ೬೦ ವರ್ಷಗಳಿಂದ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕ ಪೊಲೀಸ್ ಪಡೆ ಶಾಂತಿಕಾಲದ ಸೈನ್ಯವಿದ್ದಂತೆ ಎಂದು ಬಣ್ಣಿಸಿದರು.

ಪೊಲೀಸರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ‘ಆರೋಗ್ಯ ಭಾಗ್ಯ’ ಮತ್ತು ’ಆರೋಗ್ಯ ಸಂಜೀವಿನಿ’ ಯೋಜನೆಗಳ ಮೂಲಕ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಪೊಲೀಸರು ಮತ್ತು ಅವರ ಕುಟುಂಬದವರಿಗೆ ನೀಡಲಾಗುತ್ತಿದೆ. ಕರ್ತವ್ಯದ ಒತ್ತಡದ ನಡುವೆಯೂ ಕುಟುಂಬದೊಂದಿಗೆ ಕಾಲ ಕಳೆಯಲು ವಿಶೇಷ ರಜೆಗಳನ್ನು ಘೋಷಿಸಲಾಗಿದೆ. ಸೈಬರ್ ಅಪರಾಧಗಳನ್ನು ತಡೆಯಲು ರಾಜ್ಯದಲ್ಲಿ ವಿಶೇಷ ಸೈಬರ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಡ್ರೋನ್ ಪೊಲೀಸ್ ಪಡೆ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯಿಂದ ಮುಖ್ಯಮಂತ್ರಿಗಳ ಪೊಲೀಸ್ ಪದಕ ಪಡೆದ ಶೈಲೇಶ್ ಕುಮಾರ್ ಹಾಗೂ ಗಿರೀಶ್ ಅವರನ್ನು ಅಭಿನಂದಿಸಿದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು, ಸಾರ್ವಜನಿಕರು ಪೊಲೀಸ್ ಧ್ವಜಗಳನ್ನು ಖರೀದಿಸುವ ಮೂಲಕ ಪೊಲೀಸ್ ಕಲ್ಯಾಣ ನಿಧಿಗೆ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹೆಚ್.ಎಸ್.ಕೀರ್ತನಾ ಮಾತನಾಡಿ, ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತ್ಯಾಗ ಅಪ್ರತಿಮವಾದುದು ಎಂದರು.

ನಾವೆಲ್ಲರೂ ಗೌರಿ-ಗಣೇಶನ ಹಬ್ಬ ಮತ್ತಿತರ ಹಬ್ಬಗಳನ್ನು ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸುವಾಗ, ಪೊಲೀಸರು ತಮ್ಮ ವೈಯಕ್ತಿಕ ಸಂತೋಷ ಹಾಗೂ ಕುಟುಂಬವನ್ನು ಬದಿಗೊತ್ತಿ ಸಮಾಜದ ರಕ್ಷಣೆಗಾಗಿ ಬೀದಿಗಳಲ್ಲಿ ನಿಂತು ಕೆಲಸ ಮಾಡುತ್ತಾರೆ. ಸಮಾಜಕ್ಕಾಗಿ ಪ್ರಾಣತ್ಯಾಗ ಮಾಡಿದ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೊಲೀಸರ ಕಾರ್ಯಕ್ಕೆ ನಾವೆಲ್ಲರೂ ಗೌರವ ಸಲ್ಲಿಸಬೇಕು. ಕೇವಲ ಪೊಲೀಸರು ಮಾತ್ರವಲ್ಲದೆ, ನಾಗರಿಕರು ಸಹ ಕಾನೂನು ಪಾಲಿಸುವ ಮೂಲಕ ಶಿಸ್ತು ಕಾಪಾಡಿದರೆ ಇಲಾಖೆಯ ಮೇಲಿನ ಕೆಲಸದ ಒತ್ತಡ ಕಡಿಮೆಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮಾತನಾಡಿ, ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರ ಕ್ಷೇಮಾಭಿವೃದ್ಧಿಗೆ ಇಲಾಖೆ ಸದಾ ಸಿದ್ಧವಿದೆ ಎಂದು ತಿಳಿಸಿದ ಅವರು, ೧೯೬೫ರ ಏಪ್ರಿಲ್ ೨ರಂದು ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಈ ದಿನವನ್ನು ಧ್ವಜ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದಂದು ಮಾರಾಟವಾಗುವ ಧ್ವಜಗಳಿಂದ ಸಂಗ್ರಹವಾಗುವ ನಿಧಿಯನ್ನು ಸಂಪೂರ್ಣವಾಗಿ ನಿವೃತ್ತ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ ಎಂದು ತಿಳಿಸಿದರು.

ಸೇವೆಯಲ್ಲಿರುವ ಮತ್ತು ನಿವೃತ್ತ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ನೀಡಲಾಗುತ್ತಿದೆ. ಅಲ್ಲದೆ, ಮೃತಪಟ್ಟ ಸಿಬ್ಬಂದಿಗಳ ಅಂತ್ಯಕ್ರಿಯೆಗಾಗಿ ಇಲಾಖೆಯಿಂದ ತಕ್ಷಣದ ಧನಸಹಾಯ ನೀಡಲಾಗುತ್ತಿದೆ ಎಂದರು.

ಪೊಲೀಸ್ ಇಲಾಖೆಯ ತ್ಯಾಗ ಮತ್ತು ಸೇವೆಯನ್ನು ಸ್ಮರಿಸುವ ಈ ದಿನದಂದು ಸಾರ್ವಜನಿಕರು ಪೊಲೀಸ್ ಧ್ವಜಗಳನ್ನು ಖರೀದಿಸುವ ಮೂಲಕ ಇಲಾಖೆಯ ಕಲ್ಯಾಣ ಕಾರ್ಯಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್ ಸೇರಿದಂತೆ ಪೊಲೀಸ್ ಉಪಾಧೀಕ್ಷಕರು, ಇತರೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು.

Police service is the hope of society.

Share

Leave a comment

Leave a Reply

Your email address will not be published. Required fields are marked *

Don't Miss

ನಿವೇಶನಕ್ಕೆ ಒತ್ತಾಯಿಸಿ ಹೋರಾಟ ವೇದಿಕೆಯಿಂದ ಪ್ರತಿಭಟನೆ

ಮೂಡಿಗೆರೆ: ನಿವೇನಕ್ಕಾಗಿ ಒತ್ತಾಯಿಸಿ ತಾಲೂಕಿನ ಗೋಣಿಬೀಡು ಗ್ರಾ.ಪಂ. ಎದುರು ಗುರುವಾರ ವಸತಿಗಾಗಿ ಹೋರಾಟ ವೇದಿಕೆಯ ಮುಖಂಡರು  ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ವೇದಿಕೆಯ ಗೌರವಾಧ್ಯಕ್ಷ ಬಿ.ರುದ್ರಯ್ಯ ಮಾತನಾಡಿ, ಗೋಣಿಬೀಡು ಹೋಬಳಿ, ಕಮ್ಮರಗೋಡು...

ಚೌಳಹಿರಿಯೂರು ಭಾಗದಲ್ಲಿ ಚಿರತೆ ಕಾಟ

ಕಡೂರು: ತಾಲ್ಲೂಕಿನ ಚೌಳಹಿರಿಯೂರು ಭಾಗದಲ್ಲಿ ಚಿರತೆ ಕಾಟ ಹೆಚ್ಚುತ್ತಿದ್ದು ಜನ, ಜಾನುವಾರುಗಳು ಭೀತಿಯಿಂದ ಬದುಕುವಂತಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಚೌಳಹಿರಿಯೂರು ಸೇರಿದಂತೆ ಸುತ್ತಮುತ್ತ ಇ ತಿಮ್ಮಾಪುರ, ಕುರುಬರಹಳ್ಳಿ, ತಾಂಡ್ಯ, ಮಂಜುನಾಥಪುರ...

Related Articles

ಮುಳ್ಳಯ್ಯನಗಿರಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಹೊಸ ರೂಲ್ಸ್

ಚಿಕ್ಕಮಗಳೂರು:  ಕರ್ನಾಟಕದ ನೆಚ್ಚಿನ ಪ್ರವಾಸಿ ತಾಣವಾದ ಕಾಫಿನಾಡು ಚಿಕ್ಕಮಗಳೂರಿನ  ಪ್ರಸಿದ್ಧ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹೊಸ...

ನಗರಸಭೆಯಲ್ಲಿ 2.60 ಕೋಟಿ ರೂ. ಉಳಿತಾಯ ಬಜೆಟ್‌ ಮಂಡನೆ

ಚಿಕ್ಕಮಗಳೂರು: ನಗರ ಸಭೆ ಸಿಬ್ಬಂದಿ ವೇತನ, ವಿದ್ಯುತ್‌ ಬಿಲ್‌ ಪಾವತಿ ಅನುದಾನ ಸೇರಿದಂತೆ ವಾರ್ಷಿಕ ಕೇವಲ 58...

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಅನಾರೋಗ್ಯ ವಿದ್ಯಾರ್ಥಿ

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢಶಾಲೆಯಲ್ಲಿ ಮಾನವೀಯತೆ ಮೆರೆಯುವ ಘಟನೆ ನಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ...

ಕಿತ್ತೂರು ಚೆನ್ನಮ್ಮ ಶಾಲೆಯ ಗೋಧಿ ಹೆಗ್ಗಣಗಳು

ತರೀಕೆರೆ: ಇಲ್ಲಿಗೆ ಸಮೀಪದ ನಂದಿ ಹೊಸಹಳ್ಳಿಯ ಕಿತ್ತೂರು ಚೆನ್ನಮ್ಮವಸತಿ ಶಾಲೆಯಲ್ಲಿ ಗೋಧಿ ತಿನ್ನುವ ಹೆಗ್ಗಣಗಳಿವೆ.ಮಕ್ಕಳ ಆಹಾರ...