ಕಳಸ: ಜಾನುವಾರು ಕಳ್ಳರನ್ನು ಶುಕ್ರವಾರ ನಸುಕಿನಲ್ಲಿ ಬೆನ್ನಟ್ಟಿದ ಕಳಸ ಪೊಲೀಸರು ವಾಹನ, 4 ಹಸುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಲಿಗೆ- ಹೊರನಾಡು ಕಡೆಯಿಂದ ಬಂದ ವಾಹನದ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಕಳಸ ಪೊಲೀಸರು ಪಿಎಸ್‌ಐ ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು. ವಾಹನ ದಾರಿಮನೆ- ಹಳುವಳ್ಳಿ ರಸ್ತೆಯಲ್ಲಿ ಸಾಗಿದ್ದನ್ನು ಖಚಿತಪಡಿಸಿಕೊಂಡ ಪೊಲೀಸರು ಅದೇ ಮಾರ್ಗದಲ್ಲಿ ಬೆಳಗಿನ ಜಾವ 1.30ರ ಸುಮಾರಿಗೆ ಹೊರಟಿದ್ದರು.
ಸ್ವಲ್ಪ ದೂರ ಸಾಗಿದಾಗ ದನ ಕಳ್ಳರು ವಾಹನಕ್ಕೆ ಜಾನುವಾರು ತುಂಬಿಸುತ್ತಿದ್ದು ಕಂಡು ಬಂದಿದೆ. ಪೊಲೀಸ್ ವಾಹನ ಕಳ್ಳರ ವಾಹನಕ್ಕಿಂತ ಮುಂದೆ ಹೋಗಿ ಅವರ ವಾಹನ ಅಡ್ಡಗಟ್ಟಿತು. ಅಷ್ಟರಲ್ಲಿ ಕಳ್ಳರು ವಾಹನವನ್ನು ಹಿಂದಕ್ಕೆ ತಿರುಗಿಸಿ ಪರಾರಿಯಾಗಲು ಯತ್ನಿಸಿದರು. ಪೊಲೀಸರು ಬೆನ್ನಟ್ಟಿದಾಗ ವಾಹನವನ್ನು ಅಲ್ಲೇ ಬಿಟ್ಟು ರಸ್ತೆ ಪಕ್ಕದ ಕಾಫಿ ತೋಟದ ಒಳಗೆ ಕಳ್ಳರು ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದನಕಳ್ಳರ ವಾಹನದಲ್ಲಿ 4 ಹಸುಗಳು, 3 ಫೋನ್ ಮತ್ತು ಒಂದು ಕಬ್ಬಿಣದ ರಾಡ್ ಪತ್ತೆ ಆಗಿದೆ. ವಾಹನದ ನಂಬರ್ ಪ್ಲೇಟ್ ನಕಲಿ ಎಂದು ತಿಳಿದುಬಂದಿದೆ. ಲಭ್ಯವಿರುವ ಮಾಹಿತಿ ಅನುಸರಿಸಿ ಕಳ್ಳರನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಕಳಸ ಠಾಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.
Police seize 4 cows from cattle thief
Leave a comment