ವಿಧಾನಸಭೆ:  ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಹಾಗೂ ತೆರಿಗೆ ಪಾಲು ಕುರಿತು ಕೆಲವೇ ದಿನಗಳಲ್ಲಿ ನಮ್ಮ ಸರ್ಕಾರ ‘ಶ್ವೇತಪತ್ರ’ ಪತ್ರ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸದನಕ್ಕೆ ತಿಳಿಸಿದರು. ನಿಯಮ 69ರ ಅಡಿ ಕಾಂಗ್ರೆಸ್‌ನ ಸದಸ್ಯರಾದ ಕೆ.ಎಂ.ಶಿವಲಿಂಗೇಗೌಡ, ಎನ್‌.ಎಚ್‌.ಕೋನರೆಡ್ಡಿ, ಶರತ್‌ ಬಚ್ಚೇಗೌಡ ಈ ವಿಷಯ ಪ್ರಸ್ತಾಪಿಸಿ ಮಾತನಾಡಿ ಶ್ವೇತಪತ್ರಕ್ಕೆ ಆಗ್ರಹಿಸಿದ್ದರು. ಈ ಸಂಬಂಧ ಶುಕ್ರವಾರ ಸದನದಲ್ಲಿ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶ್ವೇತಪತ್ರ ಹೊರಡಿಸಲು ಸರ್ಕಾರ ಸಿದ್ಧವಿದೆ.

ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಹಾಗೆಯೇ ಕೇಂದ್ರ ಸರ್ಕಾರ ರೈಲ್ವೆ ಯೋಜನೆಗಳು, ಮೆಟ್ರೋ ಯೋಜನೆಗೆ ಎಷ್ಟು ಅನುದಾನ ಕೊಟ್ಟಿದೆ ಎಂದು ಹೇಳಿ. ನೀವು ಯಾವ ಯಲ್ಲೋ, ಬ್ಲಾಕ್‌, ಗ್ರೀನ್‌ ಯಾವ ಪತ್ರವನ್ನಾದರೂ ಹೊರಡಿಸಿ. ಬಳಿಕ ನಾವು ಪತ್ರ ಹೊರಡಿಸುತ್ತೇವೆ ಎಂದರು. ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನೀವು ವಿರೋಧ ಪಕ್ಷದ ನಾಯಕರಾಗಿ ಹೀಗೆ ಮಾತನಾಡಬಾರದು. ಕೇಂದ್ರ ನೀಡಿರುವ ಅನುದಾನದ ಬಗ್ಗೆ ಸರ್ಕಾರದ ಬಳಿ ಅಂಕಿ-ಅಂಶ ಇರುತ್ತದೆ. ವಸ್ತುಸ್ಥಿತಿ ಏನಿದೆ ಎಂಬುದನ್ನು ಸರ್ಕಾರದ ಮುಂದಿದೆ. ಇದನ್ನೇ ಶ್ವೇತಪತ್ರದಲ್ಲಿ ಮುಂದಿಡಲಾಗುವುದು ಎಂದು ತಿರುಗೇಟು ನೀಡಿದರು.

 ವಿಧಾನಪರಿಷತ್‌ನಲ್ಲಿ ತಿರಸ್ಕೃತಗೊಂಡಿದ್ದ ಕರ್ನಾಟಕ ಸೌಹಾರ್ದ ಸಹಕಾರ (ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಮರುಮಂಡನೆ ಮಾಡಿ ಅನುಮೋದನೆ ಪಡೆಯಲಾಯಿತು. ವಿಧೇಯಕವನ್ನು ಪುನರ್‌ ಪರ್ಯಾಲೋಚಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ವಿಧಾನಸೌಧದಲ್ಲಿ ಅಂಗೀಕರಿಸಲಾಗಿದ್ದ ಕರ್ನಾಟಕ ಸೌಹಾರ್ದ ಸಹಕಾರ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಪರಿಷತ್‌ನಲ್ಲಿ ಚರ್ಚೆಯಾಗಿ ಸೋಲಾಗಿದೆ. ಅದಕ್ಕಾಗಿ ಮರುಮಂಡನೆ ಮಾಡಲಾಗುತ್ತಿದೆ. ವಿಧಾನಪರಿಷತ್‌ನ ಸದಸ್ಯರು ಕೆಲ ಸಲಹೆಗಳನ್ನು ನೀಡಿದ್ದು, ಅದನ್ನು ವಿಧೇಯಕದಡಿ ಜಾರಿ ಮಾಡಲಾಗುವುದು.

ಅದರಂತೆ ಮೂಲ ವಿಧೇಯಕದಲ್ಲಿ ಸಹಕಾರ ಸಂಘಗಳ ನಿರ್ದೇಶಕರು ಪ್ರತಿ ವರ್ಷ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕಾಗಿತ್ತು. ಇದೀಗ ಅದನ್ನು 2 ವರ್ಷಕ್ಕೆ ವಿಸ್ತರಿಸಲಾಗುವುದು. ಅದರ ಜತೆಗೆ ಸಹಕಾರ ಸಂಘಗಳು ಡಿಸಿಸಿ ಬ್ಯಾಂಕ್‌, ಅಪೆಕ್ಸ್‌ ಬ್ಯಾಂಕ್‌ಗಳಲ್ಲಿ ಠೇವಣಿ ಇಡಬೇಕು ಎಂಬ ನಿಯಮವನ್ನು ಆರ್‌ಬಿಐ ಅನುಮೋದಿತ ಸಹಕಾರ ಸಂಸ್ಥೆಗಳಲ್ಲಿಡುವಂತೆ ಬದಲಿಸಲಾಗುವುದು. ಆದರೆ, 3 ವರ್ಷಕ್ಕೊಮ್ಮೆ ಸರ್ಕಾರದ ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ಮಾಡುವ ಅಂಶ ಬದಲಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ವಿಧೇಯಕದಲ್ಲಿನ ನಿಯಮಗಳಲ್ಲಿ ಅಗತ್ಯ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು. ಕೊನೆಗೆ ಧ್ವನಿಮತದ ಮೂಲಕ ವಿಧೇಯಕಕ್ಕೆ ಮತ್ತೊಮ್ಮೆ ಅನುಮೋದನೆ ನೀಡಲಾಯಿತು.

Our government’s ‘White Paper’ letter