Home namma chikmagalur chikamagalur ರೈತರು ಕೇವಲ ಬೆಳೆಗಾರರಾಗದೆ ರಫ್ತುದಾರರಾಗಿ ಮಾರ್ಪಡಲಿ
chikamagalurHomeLatest Newsnamma chikmagalur

ರೈತರು ಕೇವಲ ಬೆಳೆಗಾರರಾಗದೆ ರಫ್ತುದಾರರಾಗಿ ಮಾರ್ಪಡಲಿ

Share
Share

ಚಿಕ್ಕಮಗಳೂರು:  ರೈತರು ಕೇವಲ ಬೆಳೆಗಳನ್ನು ಬೆಳೆಯುವುದಕ್ಕೆ ಸೀಮಿತರಾಗದೆ, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡುವತ್ತ ಗಮನ ಹರಿಸಬೇಕು. ಈ ಮೂಲಕವಷ್ಟೇ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ (ಕೆಪೆಕ್) ಅಧ್ಯಕ್ಷ ಬಿ.ಹೆಚ್.ಹರೀಶ್ ಅವರು ಪ್ರತಿಪಾದಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾಳುಮೆಣಸು ಮತ್ತಿತರೆ ಸಾಂಬಾರ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ರಫ್ತು ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರು ಬೆಳೆದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಸೇರಿದಾಗ ಮಾತ್ರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ಇದು ಕೇವಲ ರೈತರ ಅಭಿವೃದ್ಧಿಯಷ್ಟೇ ಅಲ್ಲದೆ, ದೇಶದ ಒಟ್ಟಾರೆ ಆದಾಯದ ಹೆಚ್ಚಳಕ್ಕೂ ಸಹಕಾರಿಯಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮಾತನಾಡಿ, ರೈತರು ತಾವು ಬೆಳೆದ ಬೆಳೆಗಳಿಗೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಬೇಕು. ಈ ಮೂಲಕ ರೈತರು ಕೇವಲ ಬೆಳೆಗಾರರಾಗಿ ಉಳಿಯದೆ ಉದ್ಯಮಿಗಳಾಗಿ ಹೊರಹೊಮ್ಮಬೇಕು ಎಂದರು.

ಸುಮಾರು ೫೦೦ ವರ್ಷಗಳ ಹಿಂದೆ ವಾಸ್ಕೋಡಗಾಮ ಭಾರತಕ್ಕೆ ಬಂದಾಗ ಇಲ್ಲಿನ ಮಸಾಲೆ ಪದಾರ್ಥಗಳಿಗೆ ಮಾರುಹೋಗಿದ್ದನು. ಇಂದಿಗೂ ಕರಿಮೆಣಸು ವಿಶ್ವದಲ್ಲೇ ಅತ್ಯಂತ ಬೇಡಿಕೆಯಿರುವ ಅಮೂಲ್ಯ ಕೃಷಿ ಉತ್ಪನ್ನವಾಗಿದೆ ಎಂದು ಹೇಳಿದರು.

ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬ ಆತಂಕ ಸದಾ ಇರುತ್ತದೆ. ಆದರೆ, ಬೆಳೆಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿದರೆ, ಮಾರುಕಟ್ಟೆಯಲ್ಲಿ ಇರುವ ಬೆಲೆಗಿಂತ ಹೆಚ್ಚಿನ ಲಾಭವನ್ನು ರೈತರೇ ನೇರವಾಗಿ ಪಡೆಯಲು ಸಾಧ್ಯವಿದೆ. ಇಂದು ಮುಕ್ತ ಮಾರುಕಟ್ಟೆ ವ್ಯವಸ್ಥೆ ಇರುವುದರಿಂದ ನಮ್ಮ ಉತ್ಪನ್ನಗಳನ್ನು ವಿಶ್ವದ ಯಾವುದೇ ದೇಶಕ್ಕೆ ರಫ್ತು ಮಾಡಬಹುದು.

ಇದಕ್ಕಾಗಿ ತಾಂತ್ರಿಕ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ರೈತರು ಜ್ಞಾನ ಪಡೆಯಬೇಕು. ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಹವಾಮಾನವು ಕರಿಮೆಣಸು ಬೆಳೆಯಲು ಅತ್ಯಂತ ಪೂರಕವಾಗಿದೆ. ಈ ಸೌಲಭ್ಯವನ್ನು ಬಳಸಿಕೊಂಡು ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

ಕೆಫೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಹಾಗೂ ರೈತರು ಮತ್ತು ಬಡವರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ತೋರುತ್ತಿರುವ ಕಾಳಜಿ ಮತ್ತು ಕಾರ್ಯವೈಖರಿ ಅತ್ಯಂತ ಶ್ಲಾಘನೀಯ. ನಿರುದ್ಯೋಗ ಮತ್ತು ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಂತಹ ’ಬರ್ನಿಂಗ್ ಇಶ್ಯೂ’ಗಳ ಬಗ್ಗೆ ಜಿಲ್ಲಾಡಳಿತ ಕಾಳಜಿ ವಹಿಸುತ್ತಿದೆ.

ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಬೆಳೆಗಳಿಗೆ ಮೌಲ್ಯವರ್ಧನೆ ಮಾಡಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಅಧಿಕಾರಿಗಳು ಇಷ್ಟು ಪ್ರೊ-ಆಕ್ಟಿವ್ ಆಗಿ ಕೆಲಸ ಮಾಡಿದಾಗ ಜಿಲ್ಲೆಯಲ್ಲಿ  ಕ್ರಾಂತಿಕಾರಕ ಬದಲಾವಣೆ ಸಾಧ್ಯವಾಗುತ್ತದೆ ಎಂದು ಶಿವಪ್ರಕಾಶ್ ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಮಾತನಾಡಿ, ಪದವಿ ಮುಗಿಸಿದ ನಂತರ ಕೇವಲ ಉದ್ಯೋಗಾಕಾಂಕ್ಷಿಗಳಾಗದೆ, ಉದ್ಯಮಶೀಲರಾಗಿ ಇತರರಿಗೆ ಕೆಲಸ ನೀಡುವ ಮಟ್ಟಕ್ಕೆ ಬೆಳೆಯಬೇಕು ಎಂಬುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ.  ರೈತರು ಬೆಳೆದ ಕಚ್ಚಾ ವಸ್ತುಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೇಗೆ ಲಾಭ ಗಳಿಸಬಹುದು ಎಂಬುದನ್ನು ತಿಳಿಯುವುದು ಅತ್ಯಗತ್ಯವಾಗಿದೆ ಎಂದರು.

ಜಿಲ್ಲೆಯು ಅಡಕೆ ಬೆಳೆಯ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದ್ದು, ಕೇವಲ ಒಂದು ಬೆಳೆಯ ಮೇಲೆ ಅವಲಂಬಿತವಾಗುವುದು ಮಾರುಕಟ್ಟೆಯ ಏರಿಳಿತ ಅಥವಾ ರೋಗದ ಸಂದರ್ಭದಲ್ಲಿ ರೈತರನ್ನು ಸಂಕಷ್ಟಕ್ಕೆ ದೂಡುತ್ತದೆ. ಹೀಗಾಗಿ ಕೃಷಿಯಲ್ಲಿ ವೈವಿಧ್ಯತೆ ಮತ್ತು ಸಂಸ್ಕರಣೆಗೆ ಆದ್ಯತೆ ನೀಡಬೇಕು.

ಕೆಪೆಕ್ ಸಂಸ್ಥೆಯು ಈವರೆಗೆ ಸುಮಾರು ೯ ಸಾವಿರ ಸಾಲಗಳನ್ನು ನೀಡಿದ್ದು, ಇದರಿಂದ ಸುಮಾರು ೯೦ ಸಾವಿರ ಉದ್ಯೋಗಗಳು ಸೃಷ್ಟಿಯಾಗಿವೆ. ಯಶಸ್ಸಿನ ಮಾದರಿಗಳನ್ನು ಅನುಸರಿಸಿ ಯುವಜನರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್ ಮಾತನಾಡಿ, ರೈತರು ತಾವು ಬೆಳೆದ ಬೆಳೆಗಳನ್ನು ಕೇವಲ ಕಚ್ಚಾ ರೂಪದಲ್ಲಿ ಮಾರಾಟ ಮಾಡದೆ, ಅವುಗಳಿಗೆ ಮೌಲ್ಯವರ್ಧನೆ ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ಈ ಹಿಂದೆ ರಾಗಿಯನ್ನು ಕೇವಲ ಮುದ್ದೆ ಅಥವಾ ರೊಟ್ಟಿಗೆ ಸೀಮಿತಗೊಳಿಸಲಾಗಿತ್ತು, ಆದರೆ ಇಂದು ರಾಗಿಯಿಂದ ತಯಾರಿಸಿದ ಬೇಕರಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದಿವೆ ಎಂದು ತಿಳಿಸಿದರು.

ಬೆಳೆದ ಬೆಳೆಗಳನ್ನು ಹಾಗೆಯೇ ಮಾರಿದರೆ ಸಿಗುವ ಅಲ್ಪ ಆದಾಯದ ಬದಲಿಗೆ, ಅದನ್ನು ಪೌಡರ್, ಪ್ಯಾಕೆಟ್ ಅಥವಾ ಬಾಟಲಿಗಳಲ್ಲಿ ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ನಾಲ್ಕೈದು ಪಟ್ಟು ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ ಎಂದರು. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಮಂಗಳಾ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ರೈತರು ಕಾರ್ಯಕ್ರಮದಲ್ಲಿದ್ದರು.

ಅನಂತರ ನಡೆದ ಕಾರ್ಯಾಗಾರದಲ್ಲಿ ಕಾಳುಮೆಣಸಿನಲ್ಲಿ ಕ್ಷೇತ್ರಾಧಾರಿತ ಹಾಗೂ ಕೊಯ್ಲಿನ ನಂತರದ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯದ ಸಂಬಾರು ಔಷಧೀಯ ಹಾಗೂ ಸುಗಂಧ ಬೆಳೆಗಳ ವಿಭಾಗದ ಸಹ ಪ್ರಾಧ್ಯಾಪಕ ಡಾ.ಬಿ.ಎಸ್.ಹರೀಶ್, ಕಾಳುಮೆಣಸು ಮತ್ತು ಇತರೆ ಸಂಬಾರು ಉತ್ಪನ್ನಗಳ ರಫ್ತು ಪ್ರಕ್ರಿಯೆ-ಮೂಲಭೂತ ಅವಶ್ಯಕತೆಗಳ ಪರಿಚಯ ಬಗ್ಗೆ ಸಂಬಾರು ಮಂಡಳಿ ಉಪನಿರ್ದೇಶಕ (ನಿವೃತ್ತ) ಡಾ.ಜಿ.ಕೆ.ವಿದ್ಯಾಶಂಕರ್, ಅಡಿಕೆ, ತೆಂಗು, ಕಾಫಿ ಮತ್ತಿತರೆ ತಾಕುಗಳಲ್ಲಿ ಅಂತರ ಬೆಳೆಯಾಗಿ ಕಾಳುಮೆಣಸಿನ ಮಹತ್ವದ ಬಗ್ಗೆ ಭಾರತೀಯ ಸಂಬಾರು ಬೆಳೆಗಳ ಅನುಸಂಧಾನ ಸಂಸ್ಥೆಯ ಪ್ರಧಾನ ವಿಜ್ಞಾನಿ (ನಿವೃತ್ತ) ಡಾ.ಎಂ.ಎನ್.ಆರ್.ವೇಣುಗೋಪಾಲ್ ಮಾತನಾಡಿದರು.

ಇತರ ಸಂಬಾರು ಬೆಳೆಗಳಾದ ಜಾಯಿಕಾಯಿ, ಏಲಕ್ಕಿ, ಲವಂಗ, ವೆನಿಲ್ಲಾ, ಕೋಕಮ್ ಬೆಳೆಗಳ ಸಂಸ್ಕರಣೆ ಹಾಗೂ ರಫ್ತು ಸಾಮರ್ಥ್ಯದ ಬಗ್ಗೆ ಸಂಬಾರು ಮಂಡಳಿಯ ಪ್ರತಿನಿಧಿಗಳು, ಪಿಎಂಎಫ್‌ಎಂಇ ಮತ್ತಿತರೆ ಯೋಜನೆಗಳಿಂದ ಸಂಬಾರು ಬೆಳೆಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಪ್ರಕ್ರಿಯೆಯಲ್ಲಿ ದೊರಕುವ ಸೌಲಭ್ಯಗಳು ಕುರಿತು ತೋಟಗಾರಿಕೆ ಉಪನಿರ್ದೇಶಕ (ಕೆಎಬಿಡಿಸಿ-ಕೆಪೆಕ್) ಟಿ.ಸಿದ್ದಲಿಂಗೇಶ್ವರ, ಸಂಬಾರು ಬೆಳೆಗಳ ರಫ್ತು ಪ್ರಕ್ರಿಯೆಯಲ್ಲಿ ಪ್ಯಾಕೇಜಿಂಗ್‌ನ ಮಹತ್ವ (ಆನ್‌ಲೈನ್) ಕುರಿತು ತಂಜಾವೂರಿನ ಎನ್‌ಐಎಫ್‌ಟಿಇಎಂ ಸಂಸ್ಥೆಯ ಪ್ರತಿನಿಧಿಗಳು, ಸಂಬಾರು ಬೆಳೆಗಳ ಉತ್ತೇಜನೆಗೆ ಸಂಬಾರು ಮಂಡಳಿಯಿಂದ ದೊರಕುವ ಸೌಲಭ್ಯಗಳ ಬಗ್ಗೆ ಸಂಬಾರು ಮಂಡಳಿಯ ಪ್ರತಿನಿಧಿಗಳು, ಸಂಬಾರು ಉತ್ಪನ್ನಗಳ ರಫ್ತು ಪ್ರಕ್ರಿಯೆಯಲ್ಲಿ ಇ-ಕಾಮರ್ಸ್ ಮತ್ತು ಡಿಜಿಟಲ್ ಮಾರ್ಕೇಟಿಂಗ್‌ನ ಅವಶ್ಯಕತೆ ಬಗ್ಗೆ ಝೆಪ್ಟೋ ಹಿರಿಯ ವ್ಯವಸ್ಥಾಪಕ-೧ ಎಂ.ಎಸ್.ಜಿತೇಂದ್ರ ಮಾತನಾಡಿದರು. ಸಂಬಾರು ಉತ್ಪನ್ನಗಳ ವ್ಯವಹಾರ ಕ್ಷೇತ್ರದ ಯಶಸ್ವಿ ಉದ್ಯಮಿ ಶಿರಸಿಯ ಕದಂಬ ಮಾರುಕಟ್ಟೆ ಸೌಹಾರ್ದ ಸಹಕಾರ ಸಂಸ್ಥೆಯ ವಿಶ್ವೇಶ್ವರ ಭಟ್ ಅವರೊಂದಿಗೆ ಸಂವಾದ ನಡೆಯಿತು.

Let farmers not just be growers but become exporters.

Share

Leave a comment

Leave a Reply

Your email address will not be published. Required fields are marked *

Don't Miss

ರಾಜಕಾರಣಿಗಳೆಂಬ ಹೊಸ-ಹೊಸ ವೇಷದಾರಿಗಳು

ಹೊಸ,ಹೊಸ ವೇಷದಾರಿಗಳು ! ರಾಜಕಾರಣ ಮತ್ತು ಇಲಾಖೆಗಳಿಗೆ ಅವಿನಾಭಾವ,ಆಕ್ರಮ ಸಂಬಂಧ. ಕಳೆದ ನಲವತ್ತು ವರ್ಷಗಳಿಂದ ಸಾರ್ವಜನಿಕ ಬದುಕು,ಹೋರಾಟ ಪತ್ರಕರ್ತನಾಗಿ ಕಂಡಿರುವ ಸತ್ಯಗಳು. 1980 ರ ತನಕ ರಾಜಕಾರಣ ಅಷ್ಟು ಕುಲಷಿತ ವಾಗಿರಲಿಲ್ಲ...

ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಸಿ ಟಿ. ರವಿಗೆ ಅಭಿನಂದನೆ

ಚಿಕ್ಕಮಗಳೂರು: ಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರಾದ ವಿಧಾನ ಪರಿಷತ್ತಿನ ಶಾಸಕ ಡಾ. ಸಿ ಟಿ. ರವಿಗೆ ಬಿಜಪಿ ಸೇರಿದಂತೆ ವಿವಿಧ ಸಂಘಟನೆ ನಾಯಕರು ಅಭಿನಂದನೆ ಸಲ್ಲಿಸಿದರು. ಸಂದರ್ಭದಲ್ಲಿ ನಮ್ಮ ಜಿಲ್ಲಾ ಬಿಜೆಪಿ...

Related Articles

ಪ್ರಿಯಾಂಕ್ ಖರ್ಗೆ ನಾಲಿಗೆ ಬಿಗಿ ಹಿಡಿದು ಮಾತನಾಡಲಿ

ಚಿಕ್ಕಮಗಳೂರು: ಸಿಎಂ ಬದಲಾವಣೆ ವಿಷಯವನ್ನು ಮರೆಮಾಚುವ ಉz್ದೆÃಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಗುರಿಯಾಗಿಸಿಕೊಂಡು ಆರೋಪ...

ಜಿಲ್ಲೆಯಲ್ಲಿ ಲಿಂಗಾಯತರನ್ನು ತುಳಿಯುತ್ತಿರುವ ಸಿ.ಟಿ.ರವಿ

ಚಿಕ್ಕಮಗಳೂರು: ಜಿಲ್ಲೆಯ ಲಿಂಗಾಯತ ಸಮುದಾಯವನ್ನು ತುಳಿಯುವ ಕೆಲಸವನ್ನು ಬಿಜೆಪಿಯ ಹಿರಿಯ ಮುಖಂಡ ಸಿ.ಟಿ.ರವಿ ಮಾಡುತ್ತಿದ್ದಾರೆ ಎಂದು...

ರೈತನಿಂದ 50 ಸಾವಿರ ಕಿತ್ತುಕೊಂಡು ಹೋದ ದುಷ್ಕರ್ಮಿಗಳು

ಚಿಕ್ಕಮಗಳೂರು: ರೈತನೊಬ್ಬ ತಾನು ಬೆಳೆದ ತರಕಾರಿಯನ್ನು ಚಿಕ್ಕಮಗಳೂರು ಎಪಿಎಂಸಿಯಲ್ಲಿ ಮಾರಾಟ ಮಾಡಿ ಹಣ ಪಡೆದು ಊರಿಗೆ...

ಮನೆಯ ಮೇಲೆ ಕಲ್ಲು ತೂರಾಟ-ದೂರು ಪ್ರತಿ ದೂರು ದಾಖಲು

ಚಿಕ್ಕಮಗಳೂರು: ನಗರದ ವಿಜಯಪುರ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರು ಹಿಂದೂಗಳ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ...