ಚಿಕ್ಕಮಗಳೂರು: ವೇತನ ಪರಿಷ್ಕರಣೆ, ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಾರಿಗೆ ನೌಕರರು ಮುಷ್ಕರ ಆರಂಭಿಸಿರುವ ಹಿನ್ನೆಲೆಯಲ್ಲಿ ಕೆಸ್‌ಆರ್‌ಟಿಸಿ ಬಸ್‌ಗಳು ಬೀದಿಗಿಳಿಯದ ಕಾರಣ ಜಿಲ್ಲೆಯಾದ್ಯಂತ ಪ್ರಯಾಣಿಕರು ಪರದಾಡುವಂತಾಯಿತು.
ಮಂಗಳವಾರ ಬೆಳಗ್ಗೆ ೬ ಗಂಟೆಯಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿತು. ಚಾಲಕರು, ನಿರ್ವಾಹಕರು ಬಸ್‌ಗಳನ್ನು ಡಿಪೋಗೆ ಕೊಂಡೊಯ್ದರು. ಇದರಿಂದ ನಿಲ್ದಾಣಗಳು ಖಾಲಿಯಾದರೆ, ಪರಸ್ಥಳಗಳಿಗೆ ತೆರಳಲು ಬಸ್‌ಗಾಗಿ ಕಾದು ಕುಳಿತಿದ್ದ ನೂರಾರು ಪ್ರಯಾಣಿಕರು ಮಾತ್ರ ಅತಂತ್ರರಾದರು.
ವಿದ್ಯಾರ್ಥಿಗಳು, ಉದ್ಯೋಗಿಗಳು, ಸರ್ಕಾರಿ ನೌಕರರು, ಕೆಲಸ-ಕಾರ್ಯಗಳಿಗೆ ಹೊರಟು ನಿಂತಿದ್ದ ಸಾಮಾನ್ಯ ಪ್ರಯಾಣಿಕರು ದಿಕ್ಕೇ ತೋಚದೆ ಖಾಸಗಿ ವಾಹನಗಳ ಮೊರೆ ಹೋದರಾದರೂ ಸಮರ್ಪಕ ಸೇವೆ ಸಿಗದೆ ನಿರಾಶರಾದರು. ಕೆಲವರು ಬೇರೆ ದಾರಿಯಿಲ್ಲದೆ ಮನೆಗೆ ವಾಪಾಸಾದರೆ ಮತ್ತೆ ಕೆಲವರು ಗಂಟೆಗಳ ವರೆಗೆ ನಿಲ್ದಾಣದಲ್ಲೇ ಕಾದು ಕುಳಿತಿದ್ದರು. ಹಲವರು ಖಾಸಗಿ ಬಸ್ಸು ಮತ್ತು ಇತರೆ ವಾಹನಗಳಲ್ಲಿ ಪ್ರಯಾಣ ಬೆಳೆಸಿದರು.
ಸರ್ಕಾರಿ ಬಸ್‌ಗಳು ಬೀದಿಗಿಳಿಯದ ಕಾರಣ ಪ್ರಯಾಣಿಕರ ಅನುಕೂಲಕ್ಕಾಗಿ ಜಿಲ್ಲಾಡಳಿತ ಖಾಸಗಿ ಬಸ್ಸು ಮತ್ತಿತರೆ ವಾಹನಗಳ ಮೋರೆ ಹೋಗಬೇಕಾಯಿತು. ಇದರಿಂದಾಗಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಖಾಸಗಿ ಬಸ್ಸುಗಳು ಆಕ್ರಮಿಸಿಕೊಂಡವು. ಕೆಲವು ತೂಪಾನ್ ವಾಹನಗಳು, ಕಾರುಗಳು ಸಹ ಬಸ್ ನಿಲ್ದಾನದಲ್ಲಿ ಕಂಡು ಬಂದವು.
ಕೆಎಸ್‌ಆರ್‌ಟಿಸಿಗೆ ಹೋಲಿಸಿದಲ್ಲಿ ಖಾಸಗಿ ಬಸ್‌ಳಲ್ಲಿ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ ಎನ್ನುವ ದೂರುಗಳು ನಗರದಲ್ಲಿ ಕೇಳಿಬರಲಾರಂಭಿಸಿತು. ಮತ್ತೆ ಕೆಲವು ಬಸ್‌ಗಳಲ್ಲಿ ದೂರದ ಊರುಗಳಿಗೆ ತೆರಳುವವರಿಗೆ ಮಾತ್ರ ಆಧ್ಯತೆ ನೀಡಿದ್ದರು. ಮಾರ್ಗಮಧ್ಯೆ ಸಿಗುವ ಊರುಗಳಲ್ಲಿ ನಿಲುಗಡೆ ಇರುವುದಿಲ್ಲ ಎಂದು ಪ್ರಯಾಣಿಕರನ್ನು ಕೆಳಗಿಳಿಸಿದ್ದೂ ಕಂಡುಬಂತು.
ಬೆಳಗ್ಗೆ ಬೆಂಗಳೂರು, ಕಡೂರು, ಮಂಗಳೂರಿನಂತಹ ಹೆಚ್ಚು ಪ್ರಯಾಣಿಕರಿರುವ ಮಾರ್ಗಗಳಲ್ಲಿ ಮಾತ್ರ ಖಾಸಗಿ ಬಸ್ ಓಡುತ್ತಿವೆ. ಆದರೆ ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ ಸೇರಿದಂತೆ ಮಲೆನಾಡು ಭಾಗದ ಮಾರ್ಗಗಳಿಗೆ ಬಸ್‌ಗಳೇ ಇಲ್ಲ ಎಂದು ಪ್ರಯಾಣಿಕರು ದೂರಲಾರಂಭಿಸಿದರು.
ಕಾಫಿ ತೋಟಗಳಲ್ಲಿ ಕೆಲಸ ಅರಸಿ ಬೇರೆ ಜಿಲ್ಲೆಗಳಿಂದ ರಾತ್ರಿ ಪ್ರಯಾಣ ಮಾಡಿ ಬೆಳಗ್ಗೆ ಬಸ್‌ನಿಲ್ದಾಣದಲ್ಲಿ ಬಂದಿಳಿದ ಕಾರ್ಮಿಕರಿಗೆ ಅಲ್ಲಿಂದ ಮುಂದೆ ಪ್ರಯಾಣಿಸಲು ಬಸ್‌ಗಳಿಲ್ಲದೆ ನಿಲ್ದಾಣದಲ್ಲೇ ಬಾಕಿ ಆಗುವಂತಾಯಿತು. ಊಟ-ಉಪಹಾರಕ್ಕೆ ತೊಂದರೆ ಅನುಭವಿಸಿದರು.
ಸಾರಿಗೆ ನೌಕರರ ಮುಷ್ಕರದ ಮಾಹಿತಿ ಇಲ್ಲದೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣಿಸಲು ಆಧಾರ್ ಕಾರ್ಡ್ ಹಿಡಿದು ಬಂದಿದ್ದ ಮಹಿಳೆಯರಿಗೆ ಬಸ್ ಇಲ್ಲ ಎನ್ನುವ ವಿಷಯ ಕೇಳಿ ಆತಂಕ ಉಂಟಾಯಿತು. ಉಚಿತ ಪ್ರಯಾಣದ ಕೆಎಸ್‌ಆರ್‌ಟಿಸಿ ಬಸ್‌ಗಳಿಲ್ಲದ ಕಾರಣ ಬಹುತೇಕ ಮಹಿಳೆಯರು ಪ್ರಯಾಣವನ್ನೇ ಮೊಟಕುಗೊಳಿಸಿದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ನವರು ಪ್ರಯಾಣಿಕರಿಲ್ಲದೆ ಬಸ್ ತುಂಬಿಸಿಕೊಳ್ಳಲು ಗಂಟೆಗಟ್ಟಲೆ ಕಾಯಬೇಕಾಯಿತು.
ಚಿಕ್ಕಮಗಳೂರು ವಿಭಾಗಕ್ಕೆ ಒಳಪಡುವ ೬ ಡಿಪೋಗಳ ೫೬೦ ಬಸ್‌ಗಳು ಸಂಪೂರ್ಣ ಸಂಚಾರವನ್ನು ಸ್ಥಗಿತಗೊಳಿಸಿವೆ. ಇವನ್ನೆ ನೆಚ್ಚಿಕೊಂಡಿದ್ದ ಸಹಸ್ರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಸರ್ಕಾರಿ ಬಸ್‌ಗಳು ಬೀದಿಗಿಳಿಯದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು.
ಅಪರ ಜಿಲ್ಲಾಧಿಕಾರಿ ನಾರಾಯಣ ಕನಕ ರಡ್ಡಿ ಮಾತನಾಡಿ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಜಿಲ್ಲೆಯಾದ್ಯಂತ ಖಾಸಗಿ ವಾಹನಗಳ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಮಂಗಳವಾರ ಬೆಳಗ್ಗೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಖಾಸಗಿ ಬಸ್ ವ್ಯವಸ್ಥೆ ಪರಿಶೀಲಿಸಿ ನಂತರ ಮಾತನಾಡಿದ ಅವರು, ಕೆಸ್‌ಆರ್‌ಟಿಸಿ ನಿಲ್ದಾಣ ಪ್ರವೇಶಕ್ಕೆ ಖಾಸಗಿ ಬಸ್‌ಗಳಿಗೆ ಅವಕಾಶ ನೀಡಲಾಗಿದೆ. ಖಾಸಗಿ ಮಾರ್ಗಗಳಲ್ಲಿ ಓಡಿಸಲಾಗುತ್ತಿದ್ದ ಬಸ್ ಮಾಲೀಕರ ಜೊತೆ ಸಭೆ ಮಾಡಿದ್ದೇವೆ.
ಬೆಳಗ್ಗೆ ೪ ಗಂಟೆಯಿಂದಲೇ ಎಲ್ಲಾ ಕಡೆಗಳಲ್ಲಿ ತಾವು ಸೇರಿದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿ, ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಸಿಬ್ಬಂದಿಗಳು ಬೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುತ್ತಿದ್ದೇವೆ. ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಕಂಡುಬಂದಿಲ್ಲ.
ಆರ್‌ಟಿಓ ಅಧಿಕಾರಿಗಳು ಎಲ್ಲಾ ಖಾಸಗಿ ಬಸ್‌ನವರ ಸಭೆ ನಡೆಸಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ ಸುಮಾರು ೭೫ ಮಂದಿ ಹೊರಗುತ್ತಿಗೆ ಚಾಲಕರು ಇದ್ದಾರೆ. ೧೦೦ ಮಂದಿ ತರಬೇತಿ ನಿರತ ಚಾಲಕರು ಇದ್ದಾರೆ. ಅವರು ಸಹ ಕರ್ತವ್ಯಕ್ಕೆ ಬರುತ್ತಾರೆ ಎಂದು ತಿಳಿಸಿದರು.
KSRTC buses not on the streets – passengers stranded across the district
Leave a comment