ಕಡೂರು: ಚಿನ್ನ ಖರೀದಿಸಿ ಹಣ ಪಾವತಿಸದೆ ಮೋಸ ಮಾಡಿರುವ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ ವಿಜಯಪುರದ ನಂದನ್ ಎಂಬ ವ್ಯಕ್ತಿಯನ್ನು ಬಂಧಿಸಿರುವ ಸಖರಾಯಪಟ್ಟಣ ಪೊಲೀಸರು ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಲಾದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸಖರಾಯಪಟ್ಟಣದ ಹನುಮಾನ್ ಲಾಲ್ ಎಂಬುವರ ಮಾಲೀಕತ್ವದ ಚಾಮುಂಡಿ ಜುವೆಲ್ಲರಿ ಶಾಪ್ನಲ್ಲಿ ₹3.50 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಿ ಹಣವನ್ನು ನೆಫ್ಟ್ ಮೂಲಕ ವರ್ಗಾಯಿಸುವುದಾಗಿ ನಂಬಿಸಿ ಹಣ ನೀಡದೇ ಇರುವ ನಂದನ್ ವಿರುದ್ಧ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಡೂರು ಸರ್ಕಲ್ ಇನ್ಸ್ಪೆಕ್ಟರ್ ರಫೀಕ್ .ಎಂ ನೇತೃತ್ವದಲ್ಲಿ ಪಿಎಸ್ಐ ಪವನ್ ಕುಮಾರ್ ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ತಂಡವು ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ಹಾಸನ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ನಂದನ್ ಕೆ ಎಂಬಾತನನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆ ವೇಳೆ ಆತ ಚಿನ್ನಾಭರಣ ತೆಗೆದುಕೊಂಡು ಹೋಗಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಒಂದು ಚಿನ್ನದ ಚೈನ್, ಒಂದು ಬ್ರಾಸ್ಲೆಟ್, ಚಿನ್ನದ ಉಂಗುರ ಸೇರಿ 30 ಗ್ರಾಂ ತೂಕದ ಚಿನ್ನಾಭರಣ, ಐ20 ಕಾರು, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪತ್ತೆ ಕಾರ್ಯದಲ್ಲಿ ಪಿಎಸ್ಐಗಳಾದ ಪವನ್ ಕುಮಾರ್.ಸಿ.ಸಿ, ಮಂಜುಳಾಬಾಯಿ ಹಾಗೂ ಅಪರಾಧ ಪತ್ತೆ ತಂಡದಲ್ಲಿ ಸಿಬ್ಬಂದಿ ದೇವರಾಜ, ಅರುಣ್ ಕುಮಾರ್, ತನಿಖಾ ಸಹಾಯಕರಾಗಿ ಶಿವಕುಮಾರ್.ವಿ, ವಸಂತಕುಮಾರ, ಸಂದೇಶ, ಮಂಜಪ್ಪ, ರವಿನಾಯ್ಕ, ರಘು, ಕೃಷ್ಣಮೂರ್ತಿ, ಕಾರ್ತಿಕ್, ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗದ ಅಂಜೂಮ್ ನಯಾಜ್ ಮತ್ತು ರಬ್ಬಾನಿ ಭಾಗವಹಿಸಿದ್ದರು. ಆರೋಪಿ ಪತ್ತೆ ಹಚ್ಚಿದ ತಂಡಕ್ಕೆ ಎಸ್ಪಿ ವಿಕ್ರಂ ಅಮಟೆ ಬಹುಮಾನ ಘೋಷಿಸಿದ್ದಾರೆ.
Jewelery purchase: Fraudster arrested
Leave a comment