ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿರುವ ಡಾ. ಅಂಬೇಡ್ಕರ್ ಭವನವನ್ನು ಸುಮಾರು ೨ ಕೋಟಿ ರೂ ವೆಚ್ಚದಲ್ಲಿ ನವೀಕರಣಗೊಳಿಸಲಾಗುವುದೆಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ಅವರು ಇಂದು ನಗರದ ಅಂಬೇಡ್ಕರ್ ಭವನ ನವೀಕರಣ ಸಂಬಂಧ ಅಧಿಕಾರಿಗಳು ಹಾಗೂ ಶೋಷಿತ ವರ್ಗದ ಸಂಘಟನೆಗಳ ಪ್ರಮುಖರೊಂದಿಗೆ ಭೇಟಿಮಾಡಿ ನಂತರ ಮಾತನಾಡಿ ರಾಜ್ಯಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪನವರ ನೇತೃತ್ವದಲ್ಲಿ ನಗರದ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ಭವನ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ೨ ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಶೋಷಿತ ವರ್ಗದ ಸಂಘಟನೆಗಳ ಪ್ರಮುಖರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿ ಚರ್ಚಿಸಲಾಗಿದ್ದು, ಅಭಿಪ್ರಾಯ ಸಂಗ್ರಹಿಸಲಾಗಿದೆ. ಅಂಬೇಡ್ಕರ್ ಭವನ ನಿರ್ವಹಣೆ ಮತ್ತು ಅನುದಾನವನ್ನು ಸದ್ಭಳಕೆ ಮಾಡುವ ಮೂಲಕ ಸಮಗ್ರ ಅಭಿವೃದ್ಧಿ ಮಾಡಲಾಗುವುದೆಂದು ಹೇಳಿದರು.
ಸುಸಜ್ಜಿತ ಶೌಚಾಲಯ, ಸ್ವಚ್ಛತೆ, ಅಡುಗೆ ಮನೆ, ಸಿಸಿ ಟಿವಿ ಮುಂತಾದವುಗಳನ್ನು ಅಳವಡಿಸಲಾಗುವುದು. ನಗರದ ಹೊರಭಾಗದಲ್ಲಿ ೫-೧೦ ಎಕರೆ ಜಾಗವನ್ನು ಜಿಲ್ಲಾಡಳಿತ ಗುರ್ತಿಸಿದ್ದು, ಸಧ್ಯದಲ್ಲೇ ಜಿಲ್ಲಾಮಟ್ಟದ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಥವಾ ಬುದ್ಧ ವಿಹಾರ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ವಕೀಲ ಅನಿಲ್‌ಕುಮಾರ್ ಮಾತನಾಡಿ, ಈ ಅಂಬೇಡ್ಕರ್ ಭವನವನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಿ ಬಡವರ ಅನುಕೂಲಕ್ಕೆ ಸದ್ಭಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಧಾಕೃಷ್ಣ ಮಾತನಾಡಿ, ನಗರದ ಅಂಬೇಡ್ಕರ್ ಭವನ ತುಂಬಾ ಶಿಥಿಲಾವಸ್ಥೆಯಲ್ಲಿದ್ದು, ಈ ಬಗ್ಗೆ ಅನೇಕ ವರ್ಷಗಳ ಹೋರಾಟ ಇಂದು ಫಲಿಸಿದೆ. ಶಾಸಕ ಹೆಚ್.ಡಿ. ತಮ್ಮಯ್ಯನವರ ಪರಿಶ್ರಮದ ಫಲವಾಗಿ ರಾಜ್ಯಸರ್ಕಾರದಿಂದ ೨ ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಇಂದು ನಡೆದ ಸಭೆಯಲ್ಲಿ ಸೂಕ್ತ ಸಲಹೆಗಳನ್ನು ನೀಡಲಾಗಿದ್ದು, ಶೋಷಿತ ಸಮುದಾಯಕ್ಕೆ ಈ ಭವನ ಮುಂದೆ ಅನುಕೂಲವಾಗಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ ಮಾತನಾಡಿ, ಅಂಬೇಡ್ಕರ್ ಭವನ ನವೀಕರಣಗೊಳ್ಳುತ್ತಿರುವುದು ಶೋಷಿತರು, ಬಡವರು, ಅಂಬೇಡ್ಕರ್ ಅನುಯಾಯಿಗಳು ಹಾಗೂ ಎಲ್ಲಾ ವರ್ಗದ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ ಅವರು, ಶಾಸಕರ ಮುಂದಿನ ಜೀವನ ಉಜ್ವಲವಾಗಿ ಬೆಳೆಯಲಿ, ರಾಜಕೀಯವಾಗಿ ಪ್ರಜ್ವಲಿಸಲಿ ಎಂದು ಶುಭಹಾರೈಸಿದರು.
Leave a comment