Home namma chikmagalur chikamagalur ಆಮಿಷಗಳಿಗೆ ಬಲಿಯಾಗಬೇಡಿ-ಗ್ರಾಹಕರು ಹಕ್ಕುಗಳ ಬಗ್ಗೆ ಜಾಗೃತರಾಗಲಿ
chikamagalurHomeLatest Newsnamma chikmagalur

ಆಮಿಷಗಳಿಗೆ ಬಲಿಯಾಗಬೇಡಿ-ಗ್ರಾಹಕರು ಹಕ್ಕುಗಳ ಬಗ್ಗೆ ಜಾಗೃತರಾಗಲಿ

Share
Share

ಚಿಕ್ಕಮಗಳೂರು: ಇಂದಿನ ಆಧುನಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಆಕರ್ಷಕ ಆಮಿಷಗಳಿಗೆ ಬಲಿಯಾಗದೆ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಬೇಕು. ಅದರಲ್ಲೂ ಪ್ರಾಣಾಪಾಯವಿರುವ ವೈದ್ಯಕೀಯ ಸೇವೆಯಂತಹ ಕ್ಷೇತ್ರಗಳಲ್ಲಿ ನಿರ್ಲಕ್ಷ್ಯ ಕಂಡುಬಂದಲ್ಲಿ ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಟಿ.ಜೆ. ಶಿವಶಂಕರೇಗೌಡ ಹೇಳಿದರು.

ನಗರದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಗ್ರಾಹಕ ಆಯೋಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನೂತನ ‘ಮಧ್ಯಸ್ಥಿಕೆ ಕೇಂದ್ರ’ ಉದ್ಘಾಟಿಸಿ ಅವರು ಮಾತನಾಡಿ ಗ್ರಾಹಕರು ವಿವಿಧ ಸೇವೆಗಳಲ್ಲಿ ಅನುಭವಿಸುವ ತೊಂದರೆಗಳಿಗೆ ನ್ಯಾಯ ಒದಗಿಸುವುದು ನಮ್ಮ ಆದ್ಯತೆ. ಅದರಲ್ಲೂ ವಿಶೇಷವಾಗಿ ವಿಮಾ ಕಂಪನಿಗಳು ಸಣ್ಣಪುಟ್ಟ ತಾಂತ್ರಿಕ ಕಾರಣಗಳನ್ನು ಒಡ್ಡಿ ವಿಮಾ ಮೊತ್ತವನ್ನು ನಿರಾಕರಿಸುವ ಪ್ರವೃತ್ತಿಯನ್ನು ತಡೆಗಟ್ಟಬೇಕಿದೆ ಎಂದರು.

ಆನ್ಲೈನ್ ಮಾರುಕಟ್ಟೆಯಲ್ಲಿ ‘ಬೈ ಒನ್ ಗೆಟ್ ಒನ್ ಫ್ರೀ’ ಎನ್ನುವಂತಹ ಆಮಿಷಗಳು ಸಾಮಾನ್ಯವಾಗುತ್ತಿವೆ. ಇಂತಹ ವಾಣಿಜ್ಯೀಕರಣ ವೈದ್ಯಕೀಯ ಕ್ಷೇತ್ರಕ್ಕೂ ವ್ಯಾಪಿಸಬಾರದು. ಒಂದು ಶಸ್ತ್ರಚಿಕಿತ್ಸೆ ಮಾಡಿದರೆ ಮತ್ತೊಂದು ಉಚಿತ ಎನ್ನುವಂತಹ ಬೇಜವಾಬ್ದಾರಿತನ ರೋಗಿಗಳ ಜೀವಕ್ಕೆ ಸಂಚಕಾರ ತರಬಾರದು’ ಎಂದು ಅವರು ಎಚ್ಚರಿಸಿದರು.

ಶಸ್ತ್ರಚಿಕಿತ್ಸೆ ವೇಳೆ ರೋಗಿಗಳ ಹೊಟ್ಟೆಯಲ್ಲಿ ಕತ್ತರಿ ಮತ್ತು ಹತ್ತಿ ಬಿಟ್ಟು ಹೊಲಿಗೆ ಹಾಕಿದ ಆಘಾತಕಾರಿ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ‘ಮಂಡ್ಯದ ಪ್ರಕರಣವೊಂದರಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಸಂಬಂಧ ಆಯೋಗವು ರೂ.೩೫ ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಗ್ರಾಹಕರ ಹಕ್ಕುಗಳ ರಕ್ಷಣೆಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ನೂತನವಾಗಿ ಉದ್ಘಾಟನೆಗೊಂಡ ‘ಮಧ್ಯಸ್ಥಿಕೆ ಕೇಂದ್ರ’ವು ಗ್ರಾಹಕರು ಮತ್ತು ಕಂಪನಿಗಳ ನಡುವಿನ ಬಿಕ್ಕಟ್ಟನ್ನು ಪರಸ್ಪರ ಮಾತುಕತೆಯ ಮೂಲಕ, ನ್ಯಾಯಾಲಯದ ಹೊರಗೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಹಕಾರಿಯಾಗಲಿದೆ. ಇದರಿಂದ ಸುದೀರ್ಘ ವರ್ಷಗಳ ಕಾಲ ನಡೆಯುವ ಕಾನೂನು ಹೋರಾಟ ಮತ್ತು ಹಣದ ವ್ಯಯವನ್ನು ತಪ್ಪಿಸಬಹುದು ಎಂದು ತಿಳಿಸಿದರು.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಾಗ, ವಿಮಾ ಕಂಪನಿಯು ಪರಿಹಾರ ನೀಡಲು ನಿರಾಕರಿಸಿತ್ತು. ಆದರೆ, ಅಪಘಾತಕ್ಕೆ ಎದುರಿನಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣವಾಗಿದ್ದರಿಂದ, ವ್ಯಕ್ತಿಯ ಮದ್ಯಪಾನಕ್ಕೂ ಅಪಘಾತಕ್ಕೂ ಸಂಬಂಧವಿಲ್ಲವೆಂದು ಪರಿಗಣಿಸಿ ೨೫ ಲಕ್ಷ ರೂ. ವಿಮಾ ಮೊತ್ತವನ್ನು ನೀಡಲು ಆದೇಶಿಸಲಾಗಿದೆ ಎಂದು ಅವರು ವಿವರಿಸಿದರು.

ಅಂತೆಯೇ, ಹಾಸನದ ಮಕ್ಕಳ ತಜ್ಞರೊಬ್ಬರು ಕ್ಯಾನ್ಸರ್‌ನಿಂದ ಮೃತಪಟ್ಟಾಗ, ಅವರು ರೋಗದ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ವಿಮಾ ಕಂಪನಿ ವಾದಿಸಿತ್ತು. ಆದರೆ ತಪಾಸಣೆಯ ನಂತರ, ವೈದ್ಯರಿಗೇ ತಮ್ಮ ರೋಗದ ಬಗ್ಗೆ ಮೊದಲೇ ತಿಳಿದಿರಲಿಲ್ಲ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ೧ ಕೋಟಿ ರೂ. ವಿಮಾ ಮೊತ್ತ ಪಾವತಿಸಲು ಸೂಚಿಸಲಾಗಿದೆ. ೨೦೧೬ರಲ್ಲಿ ಪಾಲಿಸಿ ಪಡೆದವರಿಗೆ ೨೦೨೦ರಲ್ಲಿ ಕೋವಿಡ್ ಬರುತ್ತದೆ ಎಂದು ಮೊದಲೇ ತಿಳಿದಿರುವುದಿಲ್ಲ, ಇಂತಹ ಸಂದರ್ಭಗಳಲ್ಲಿ ಹಳೆಯ ಅನಾರೋಗ್ಯದ ಕಾರಣ ನೀಡಿ ವಿಮೆ ನಿರಾಕರಿಸುವುದು ಸರಿಯಲ್ಲ ಎಂದ ಅವರು, ಇಂತಹ ಒಂದು ಪ್ರಕರಣದಲ್ಲಿ ವಿಮಾ ಕಂಪನಿಗೆ ೧೦ ಲಕ್ಷ ರೂ. ದಂಡ ವಿಧಿಸಿ ೫೦ ಲಕ್ಷ ರೂ. ವಿಮೆ ನೀಡಲು ಆದೇಶಿಸಿರುವುದಾಗಿ ತಿಳಿಸಿದರು.

ಎಲೆಕ್ಟ್ರಾನಿಕ್ ವಸ್ತುಗಳ ವಾರಂಟಿ ಅವಧಿಯಲ್ಲಿ ತೊಂದರೆ ಕಾಣಿಸಿಕೊಂಡಾಗ ಕಂಪನಿಗಳು ಉದ್ಧಟತನ ತೋರಿದರೆ ಗ್ರಾಹಕ ಆಯೋಗವು ಕಠಿಣ ಕ್ರಮ ಕೈಗೊಳ್ಳುತ್ತದೆ. ರಿಲಯನ್ಸ್ ಮತ್ತು ಸ್ಯಾಮ್ಸಂಗ್ ಕಂಪನಿಗಳಿಗೆ ಸಂಬಂಧಿಸಿದ ಟಿವಿ ವಾರಂಟಿ ಪ್ರಕರಣವೊಂದರಲ್ಲಿ ತಲಾ ೨೫ ಸಾವಿರ ರೂ. ಪರಿಹಾರ ಹಾಗೂ ೧೦ ಸಾವಿರ ರೂ. ದಂಡ ವಿಧಿಸಿ ಗ್ರಾಹಕರಿಗೆ ನ್ಯಾಯ ಒದಗಿಸಲಾಗಿದೆ ಎಂದು ಅವರು ಹೇಳಿದರು. ಗ್ರಾಹಕರು ಜಾಗೃತರಾಗಬೇಕು ಮತ್ತು ತಮಗಾಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು, ನೂತನ ಮಧ್ಯಸ್ಥಿಕೆ ಕೇಂದ್ರವು ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸಹಕಾರಿಯಾಗಲಿದೆ ಎಂದು ಅವರು ಆಶಿಸಿದರು.

ಚಿಕ್ಕಮಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ಸಂವಿಧಾನದ ವಿಧಿ ೩೯(ಎ) ಅಡಿಯಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕೆಂಬ ಆಶಯವಿದ್ದು, ಯಾರೊಬ್ಬರೂ ನ್ಯಾಯದಿಂದ ವಂಚಿತರಾಗಬಾರದು ಎಂದು ಅವರು ಪ್ರತಿಪಾದಿಸಿದರು. ಗ್ರಾಹಕರಿಗೆ ಮೋಸವಾದಾಗ ಅಥವಾ ಸೇವಾ ನ್ಯೂನತೆಗಳು ಉಂಟಾದಾಗ ಕಾನೂನು ಪರಿಹಾರಗಳನ್ನು ಕಂಡುಕೊಳ್ಳಲು ಅರಿವು ಅತ್ಯಗತ್ಯ ಹೆಚ್ಚಿನ ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅಥವಾ ಹೇಗೆ ಪರಿಹಾರ ಪಡೆಯಬೇಕು ಎಂಬ ಬಗ್ಗೆ ಸೂಕ್ತ ಜ್ಞಾನವಿಲ್ಲದಿರುವುದು ವಿಷಾದನೀಯ. ಗ್ರಾಹಕ ವೇದಿಕೆಯಲ್ಲಿ ಅಲ್ಪ ಪ್ರಕರಣಗಳು ಮಾತ್ರ ದಾಖಲಾಗುತ್ತಿದ್ದು, ಇದು ಜಾಗೃತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಹೀಗಾಗಿ, ಜನಸಾಮಾನ್ಯರಿಗೆ ಕಾನೂನು ನೆರವು ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆಗಳ ಕುರಿತು ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಆರ್.ಚೆನ್ನಕೇಶವ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟ್ರಾರ್ ಹಾಗೂ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಈ.ಪ್ರೇಮ, ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಉಪಸ್ಥಿತರಿದ್ದರು. ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಇಂದುಮತಿ ಬಾಯಿ ಬಿ.ಆರ್. ಸ್ವಾಗತಿಸಿದರು.

Don’t fall for the lures – let consumers be aware of their rights

Share

Leave a comment

Leave a Reply

Your email address will not be published. Required fields are marked *

Don't Miss

35 ಲಕ್ಷ ರೂ.ವೆಚ್ಚದ ಗ್ರಾಮಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಚಿಕ್ಕಮಗಳೂರು: ಗ್ರಾಮಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಗಳು ತಮಗೆ ದೊರಕಿದ ಅವಕಾಶವನ್ನು ಜನರ ಕಲ್ಯಾಣಕ್ಕಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ತಾಲೂಕಿನ ಬೆಳವಾಡಿಯಲ್ಲಿ ೩೫ ಲಕ್ಷ ರೂ.ವೆಚ್ಚದ ಗ್ರಾಮಪಂಚಾಯಿತಿ...

ಮಾನವಧರ್ಮಕ್ಕೆ ಜಯವಾಗಲಿ- ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

ಬಾಳೆಹೊನ್ನೂರು: “ಧರ್ಮ,‌ ಪೂಜೆ, ಭಕ್ತಿ ಇವು ಪ್ರದರ್ಶನಕ್ಕೆ ಇರುವಂತಹ ಸಂಗತಿಗಳಲ್ಲ. ಇವು ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ ಇರುವ ಸಾಧನಗಳು. ನನ್ನ ಧರ್ಮ ಸರಿ, ನಿನ್ನ ಧರ್ಮ ತಪ್ಪು ಎನ್ನುವ ಕಲ್ಪನೆ ಎಲ್ಲಿಯೂ...

Related Articles

ಕಾಂಗ್ರೆಸ್ ಮುಖಂಡ ರಾಹಿಲ್ ಶರೀಫ್‌ ಬಂಧನ

ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಕಾಂಗ್ರೆಸ್ ಮುಖಂಡೆ ಚೇತನಾ ಅವರ ಮೇಲೆ ಲಾಂಗ್‌ನಿಂದ ಹಲ್ಲೆ...

ಚಿಕ್ಕಮಗಳೂರು ಜಿಲ್ಲೆಗೆ “ಬ್ಯಾಡ್” ಬಜೆಟ್ !

ಚಿಕ್ಕಮಗಳೂರು: ಜಿಲ್ಲೆಯ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ “ಬ್ಯಾಡ್” ಬಜೆಟ್ ನೀಡಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ....

ಪ್ರವೀಣ್ ಎಚ್.ಟಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ 720ನೇ ರ್‍ಯಾಂಕ್

ಚಿಕ್ಕಮಗಳೂರು: ಕಡೂರು ತಾಲೂಕಿನ ಹುಲಿಕೆರೆ ಗ್ರಾಮದ ಯುವ ಪ್ರತಿಭೆ ಪ್ರವೀಣ್ ಎಚ್.ಟಿ. ಈ ಸಾಲಿನ ಯುಪಿಎಸ್‌ಸಿ...

ತೇಗೂರು ಸರ್ಕಾರಿ ಶಾಲೆಯ ಶತಮಾನೋತ್ಸವ

ಚಿಕ್ಕಮಗಳೂರು:  ನಮ್ಮ ಜೀವನದಲ್ಲಿ ನಾವು ಗಳಿಸುವ ಸಂಪತ್ತು ಶಾಶ್ವತವಲ್ಲ, ಆದರೆ ನಾವು ಪಡೆಯುವ ಶಿಕ್ಷಣ ಮತ್ತು...