ಶೃಂಗೇರಿ: ಕಿಡಿಗೇಡಿಗಳು ನಾಯಿಯೊಂದನ್ನು ಬಂದೂಕಿನಿಂದ ಗುಂಡು ಹೊಡೆದು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಶೃಂಗೇರಿ ತಾಲೂಕಿನ ಮೀಗಾ ಗ್ರಾಮದ ನಡುತೋಟದ ಸರ್ಕಾರಿ ಕಾಡಿನಲ್ಲಿ ಬೆಳಕಿಗೆ ಬಂದಿದೆ.
ಮಾ.6ರಂದು ರಾತ್ರಿ ಗಸ್ತಿನಲ್ಲಿದ್ದ ಮಂಜುನಾಥ ಸಿ.ಹೆಚ್.ಸಿ ಅವರಿಗೆ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿ ನಾಯಿಯು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಮೈಮೇಲೆ ಆಳವಾದ ಗಾಯದ ಗುರುತುಗಳು ಕಂಡುಬಂದಿದ್ದವು. ಮೇಲ್ನೋಟಕ್ಕೆ ಯಾರೋ ದುಷ್ಕರ್ಮಿಗಳು ಬಂದೂಕಿನಿಂದ ಗುಂಡು ಹಾರಿಸಿ ನಾಯಿಯನ್ನು ಕೊಂದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಪೊಲೀಸರು ಪಂಚರ ಸಮಕ್ಷಮ ಮಹಜರು ಪ್ರಕ್ರಿಯೆ ನಡೆಸಿ ಪ್ರಕರಣದ ನಿಖರ ಕಾರಣ ತಿಳಿಯಲು ಹಾಗೂ ಮರಣೋತ್ತರ ಪರೀಕ್ಷೆಗಾಗಿ ನಾಯಿಯ ದೇಹವನ್ನು ಶೃಂಗೇರಿ ಪಶು ವೈದ್ಯಾಧಿಕಾರಿಗಳ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮೂಕ ಪ್ರಾಣಿಯ ಈ ದಾರುಣ ಸಾವು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದ್ದು, ಈ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಸ್ತುತ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Dog killed by gunshot
Leave a comment