ಚಿಕ್ಕಮಗಳೂರು: ಜಿಲ್ಲೆಯ ಸಬ್ಬರಾಯಪಟ್ಟಣ ಮತ್ತು ತರೀಕೆರೆ ಸೇರಿದಂತೆ ರಾಜ್ಯದ ವಿವಿಧೆಡೆ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರ ಜಿಲ್ಲಾ ಕಳ್ಳರ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.
ಮೈಸೂರು ಮೂಲದ ಮಹಮ್ಮದ್ ಫರಾಜ್ ಮತ್ತು ಚಿಕ್ಕಮಗಳೂರಿನ ಭೂದೇಶ್ ಗೌಡ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಸುಮಾರು ೩೦,೧೩,೨೦೦ ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ.
ಈ ಕಾರ್ಯಾಚರಣೆಯ ವೇಳೆ ಆರೋಪಿಗಳಿಂದ ೧೯೬.೩೫೦ ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ಕಳ್ಳತನದ ಕೃತ್ಯಕ್ಕೆ ಬಳಸುತ್ತಿದ್ದ ಬಿಳಿ ಬಣ್ಣದ ಐ೨೦ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಚಿಕ್ಕಮಗಳೂರು ಜಿಲ್ಲೆಯ ಸಬ್ಬರಾಯಪಟ್ಟಣ, ತರೀಕೆರೆ ಮಾತ್ರವಲ್ಲದೆ ಮೈಸೂರು, ಗದಗ, ಹುಬ್ಬಳ್ಳಿ ಮತ್ತು ಹಾಸನದ ಹಳೇಬೀಡು ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನ ಮಾಡಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಸಿ.ಟಿ. ಅವರ ಮಾರ್ಗದರ್ಶನದಲ್ಲಿ, ತರೀಕೆರೆ ಡಿವೈಎಸ್ಪಿ ಹೆಚ್. ಪರಶುರಾಮಪ್ಪ ಮತ್ತು ಕಡೂರು ಸಿಪಿಐ ರಫೀಕ್ ನೇತೃತ್ವದ ವಿಶೇಷ ತಂಡವು ತಾಂತ್ರಿಕ ಹಾಗೂ ವೈಜ್ಞಾನಿಕ ತನಿಖೆಯ ಮೂಲಕ ಈ ಯಶಸ್ವಿ ಪತ್ತೆ ಕಾರ್ಯ ನಡೆಸಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
District police bust inter-district thieves’ network
Leave a comment