ಚಿಕ್ಕಮಗಳೂರು: ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ೧೫೬ನೇ ಜನ್ಮ ದಿನವನ್ನು ಜಿಲ್ಲಾಧಿಕಾರಿ ಕಚೇರಿ ಒಳಾವರಣದ ರಾಷ್ಟ್ರಪಿತ ನೆನಪಿನಂಗಳದಲ್ಲಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮೇರಾ ಭಾರತ್ ಮಹಾನ್ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಜಿಲ್ಲಾಧಿಕಾರಿ Pಚೆರಿ ಆವರಣದಲ್ಲಿರುವ ರಾಷ್ಟ್ರಪಿತ ನೆನಪಿನಂಗಳದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಪುತ್ಥಳಿಗೆ ಹಾಗೂ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಯಿತು.
ಗಾಯಕರಾದ ಸುರೇಂದ್ರ ನಾಯಕ್ ಹಾಗೂ ಲಾಲಿತ್ಯ ಅಣ್ವೇಕರ್ ತಂಡದವರು ಗಾಂಧೀಜಿಯವರಿಗೆ ಪ್ರಿಯವಾದ `ರಘುಪತಿ ರಾಘವ ರಾಜಾರಾಂ… ಹಾಗೂ ಸಿದ್ಧ ಬುದ್ಧ ನೀ ಸ್ಕಂದ ವಿನಾಯಕ….’ ಭಜನೆಗಳನ್ನು ಹಾಡಿದರು. ಅನಂತರ ನಡೆದ ಸರ್ವ ಧರ್ಮ ಪ್ರಾರ್ಥನೆಯಲ್ಲಿ ನಾಗಶ್ರೀ ತ್ಯಾಗರಾಜ್ ಭಗವದ್ಗೀತೆ, ಔರಂಗಜೇಬ್ ಪಾಷಾ ಕುರಾನ್ ಹಾಗೂ ಫಾದರ್ ಬಿಷಪ್ ಥಾಮಸ್ ಅಂತೋಣಿ ಬೈಬಲ್ ಪಠಣ ಮಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮಾ ಗಾಂಧೀಜಿಯವರ ೧೫೬ನೇ ಜಯಂತಿ ಅಂಗವಾಗಿ ಪದವಿ-ಸ್ನಾತಕೋತ್ತರ ಪದವಿ, ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಇಡೀ ವಿಶ್ವದಲ್ಲಿ ಅಹಿಂಸೆಯ ಹೋರಾಟದಿಂದ ಸ್ವಾತಂತ್ರ್ಯವನ್ನು ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟ ದೇಶದ ಮಹಾನ್ ನಾಯಕ ಮಹಾತ್ಮಾ ಗಾಂಧೀಜಿ. ಅಹಿಂಸಾ ತತ್ವದಡಿಯಲ್ಲಿ ಜನರನ್ನು ಒಗ್ಗೂಡಿಸಿ ಹೋರಾಟ ನಡೆಸಿದ ಫಲವಾಗಿ ನಮಗೆ ೧೯೪೭ರ ಆಗಸ್ಟ್ ೧೫ ರಂದು ನಮಗೆ ಸ್ವಾತಂತ್ರ್ಯ ಲಭಿಸಿತು. ಈ ಹೋರಾಟದ ಸಂದರ್ಭದಲ್ಲಿ ಇಂಡಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಅವರು, ಜವಾಹರ್ ಲಾಲ್ ನೆಹರು, ಸುಭಾಶ್ಚಂದ್ರ ಬೋಸ್, ಸರ್ದಾರ್ ವಲ್ಲಭ ಭಾಯಿ ಪಟೇಲ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಹೀಗೆ ಹಲವರನ್ನು ಒಗ್ಗೂಡಿಸಿಕೊಂಡು ಹೋರಾಟದಲ್ಲಿ ಧುಮುಕುತ್ತಾರೆ. ಅಂಥವರ ಶ್ರಮದಿಂದ ಇಂದು ನಾವೆಲ್ಲಾ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಸ್ವದೇಶಿ ಹತ್ತಿಯಿಂದ ತಯಾರಿಸಿದ ಉಡುಪುಗಳನ್ನು ಧರಿಸಿ ಇಡೀ ಪ್ರಪಂಚಕ್ಕೆ ಗಾಂಧೀಜಿ ಮಾದರಿಯಾಗಿದ್ದಾರೆ. ಮಹಾತ್ಮಾ ಗಾಂಧೀಜಿಯವರ ನೆನಪು ಜಯಂತಿಗೆ ಸೀಮಿತವಾಗಬಾರದು. ಅವರ ವಿಚಾರಧಾರೆಗಳನ್ನು ನಮ್ಮ ಯುವಪೀಳಿಗೆ ಅನುಸರಿಸುವಂತಾಗಬೇಕು ಎಂದು ಆಶಿಸಿದರು.
ಇಂದು ಲಾಲ್ ಬಹದ್ದೂರ್ ಶಾಸ್ತ್ರಿಯವರ ೧೨೧ನೇ ಜಯಂತಿಯನ್ನು ಕೂಡ ನಾವು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷರಾಗಿ, ದೇಶದ ಪ್ರಧಾನಿಯಾಗಿ ಅಲ್ಪಾವಧಿಯಲ್ಲಿ ಸೇವೆ ಸಲ್ಲಿಸಿದರೂ ದೀರ್ಘಾವಧಿಯಲ್ಲಿ ಜನರ ಮನಸ್ಸಿನಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ. ಇಡೀ ದೇಶದಲ್ಲಿ ಬರಗಾಲ ಬಂದಾಗ ಒಂದು ಹೊತ್ತು ಉಪವಾಸ ಇರುವಂತೆ ಕರೆ ಕೊಟ್ಟಿದ್ದರು. ಉಳ್ಳವರು ಉಪವಾಸವಿದ್ದರೆ ಬಡವರಿಗೆ ಊಟ ಸಿಗುತ್ತದೆ ಎನ್ನುವ ಅಭಿಪ್ರಾಯ ಅವರದಾಗಿತ್ತು. ಹೀಗಾಗಿ ವಾರದಲ್ಲಿ ಇಂದಿಗೂ ಸಹ ಅನೇಕ ಜನ ಒಂದು ಹೊತ್ತು ಊಟ ಬಿಡುತ್ತಿದ್ದಾರೆ. ಇದು ಶಾಸ್ತ್ರಿಯವರ ಮನವಿಗೆ ಮನ್ನಣೆ ನೀಡುತ್ತಿರುವುದರ ಫಲವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ೧೫೬ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ೧೨೧ನೇ ಜಯಂತಿ ಕಾರ್ಯಕ್ರಮದ ವಿಶೇಷ ಇಂದು. ದೇಶಕ್ಕೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟಕ್ಕೂ ಗಾಂಧೀಜಿಯವರ ಕೊಡುಗೆ ಅಪಾರವಾಗಿದ್ದು, ಸ್ಮರಣೀಯವಾಗಿದೆ. ಯುವಪೀಳಿಗೆ ಗಾಂಧೀಜಿಯವರ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು. ಈ ನಾಡನ್ನು ಕಟ್ಟುವ ಯುವಜನತೆಗೆ ಬೆಳಕಾಗುವ ಸ್ಫೂರ್ತಿದಾಯಕ ವ್ಯಕ್ತಿತ್ವವಿದ್ದರೆ ಅದು ಗಾಂಧೀಜಿಯವರದು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಕೂಡ ಪ್ರಾಮಾಣಿಕವಾದ ವ್ಯಕ್ತಿತ್ವ ಹೊಂದಿ ಈ ದೇಶದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಮಹಾತ್ಮಾ ಗಾಂಧೀಜಿ ಭಾರತೀಯ ಮೌಲ್ಯಗಳ ಪ್ರತೀಕ. ಭಾರತ ಜಗತ್ತಿಗೆ ಅಹಿಂಸೆ, ಶಾಂತಿಯನ್ನು, `ಸರ್ವೇ ಜನ ಸುಖಿನೋ ಭವಂತು’ ಎನ್ನುವ ಮಂತ್ರವನ್ನು ಕೊಟ್ಟಿರುವುದು ಭಾರತ. ಆ ಭಾರತೀಯತೆಯ ಪ್ರತೀಕ ಗಾಂಧೀಜಿ. ಸ್ವಾತಂತ್ರ್ಯ ಹೋರಾಟದಲ್ಲಿ ಜನಸಾಮಾನ್ಯರಿಗೆ ಹೋರಾಟದ ಕೆಚ್ಚನ್ನು ಹಬ್ಬಿಸುವುದರೊಳಗೆ ಗಾಂಧೀಜಿಯವರ ಪಾತ್ರ ಬಹಳ ದೊಡ್ಡದು. ಸರಳವಾದ ವಿಷಯಗಳನ್ನೆತ್ತಿಕೊಂಡ ಸ್ವಾತಂತ್ರ್ಯ ಹೋರಾಟವನ್ನು ಜನಸಾಮಾನ್ಯರ ಹೋರಾಟವನ್ನಾಗಿ ಮಾಡಿದರು. ಖಾದಿ, ಚರಕ, ಉಪ್ಪಿನ ಸತ್ಯಾಗ್ರಹದ ಮೂಲಕ ಹೋರಾಟವನ್ನು ಜನಮಾನಸಕ್ಕೆ ಮುಟ್ಟಿಸಿ ಜನರಲ್ಲಿ ಸ್ವಾತಂತ್ರ್ಯಕ್ಕಾಗಿ ನಾವೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎನ್ನುವ ಸಂಕಲ್ಪಶಕ್ತಿಯನ್ನು ಪ್ರೇರೇಪಿಸಿದ್ದು ಗಾಂಧೀಜಿ ಎಂದರು.
`ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ’ (ವಜ್ರದಷ್ಟು ಕಠಿಣವಾದ, ಆದರೆ ಹೂವಿನಷ್ಟು ಮೃದುವಾದ) ಎಂಬಂತೆ ಬಾಳಿ ಬದುಕಿದವರು ಲಾಲ್ ಬಹದ್ದೂರ್ ಶಾಸ್ತ್ರೀಯವರು. ನೋಡೋದಕ್ಕೆ ದೃಢಕಾಯರಲ್ಲದಿದ್ದರೂ ಆತ್ಮವಿಶ್ವಾಸ, ಮಾನಸಿಕ ಸಂಕಲ್ಪಕ್ಕೆ ಅವರಿಗೆ ಸರಿಸಾಟಿಯಾಗಿ ಇದ್ದವರು ಇನ್ನೊಬ್ಬರಿಲ್ಲ. `ಜೈಜವಾನ್, ಜೈಕಿಸಾನ್’ ಎನ್ನುವ ಮಂತ್ರವನ್ನು ಕೊಟ್ಟವರು ಲಾಲ್ ಬಹದ್ದೂರ್ ಶಾಸ್ತ್ರಿ. ಶಾಸ್ತ್ರಿಯವರ ನೇತೃತ್ವದಲ್ಲಿ ೧೯೬೫ರ ಪಾಕ್ ವಿರುದ್ಧ ಸಾಧಿಸಿದ ಜಯ ಅದು ಐತಿಹಾಸಿಕ ವಿಜಯ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರಾದ ಬಿ.ಹೆಚ್.ಹರೀಶ್, ನಗರಸಭೆ ಅಧ್ಯಕ್ಷರಾದ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.
District administration celebrates the birth anniversary of Father of the Nation Mahatma Gandhi
Leave a comment