ಬೀರೂರು: ರಾಜ್ಯದ ಎಲ್ಲ ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಅಂಗವಿಕಲರ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣಗಳಲ್ಲಿ ಲಿಫ್ಟ್, ಎಸ್ಕಲೇಟರ್ ಅಳವಡಿಸುವ ಉದ್ದೇಶವಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಬೀರೂರು ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ನಿಲ್ದಾಣ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್ ವಿಲೀನವಾದ ಬಳಿಕ ರಾಜ್ಯದಲ್ಲಿ ಇಲಾಖೆಯ ಕಾರ್ಯಗಳು ವೇಗ ಪಡೆದಿವೆ. ₹3300 ಕೋಟಿ ವೆಚ್ಚದಲ್ಲಿ 1,216 ಎಕರೆ ಭೂಸ್ವಾಧೀನದ ಮೂಲಕ ವಿಸ್ತರಣೆಗೆ ಇದ್ದ ಅಡಚಣೆ ತೆರವುಗೊಳಿಸಿದ್ದು ಇದೊಂದು ದಾಖಲೆಯಾಗಿದೆ ಎಂದು ಮಾಹಿತಿ ನೀಡಿದರು.
ಅಮೃತಭಾರತ್ ಯೋಜನೆಯಡಿ ಬೀರೂರು ಮತ್ತು ಕಡೂರು ನಿಲ್ದಾಣಗಳನ್ನು ತಲಾ ₹ 20 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸುವ ಕೆಲಸ 2027-28ರ ವೇಳೆಗೆ ಮುಗಿಯಲಿದೆ. ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ವಿಷಯದಲ್ಲಿ ಆಂದೋಲನವೇ ನಡೆದಿದೆ. ಈಗಾಗಲೇ 644 ಮೇಲ್ಸೇತುವೆ ನಿರ್ಮಿಸಲಾಗಿದೆ.1,662 ಕಿ.ಮೀ ಹೊಸಲೈನ್ ಅಳವಡಿಕೆ ಪ್ರಗತಿಯಲ್ಲಿದೆ ಎಂದರು.
ಶುದ್ಧ ಕುಡಿಯುವ ನೀರು ಪೂರೈಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವಿಷಯದಲ್ಲಿ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ರಾಜ್ಯ ದೇಶದಲ್ಲಿ 21ನೇ ಸ್ಥಾನದಲ್ಲಿದ್ದು ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ದೂರಿದರು.
ಈ ವೇಳೆ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಕಡೂರು ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ, ಬೀರೂರು ಪುರಸಭಾಧ್ಯಕ್ಷೆ ಭಾಗ್ಯಲಕ್ಷ್ಮಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಸವಿತಾ ರಮೇಶ್ ಹಾಜರಿದ್ದರು.
Development of all railway stations in the state on the model of airports
Leave a comment