ತರೀಕೆರೆ: ಯುವಜನತೆ ಹಾಗು ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರಿಂದ ಜ್ಞಾನದ ಜೊತೆಗೆ ಸ್ವಾಭಿಮಾನದಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಅಂಚೆ ಪ್ರತಿಷ್ಠಾನ ದ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಅಂಚೆ ನಾಗಭೂಷಣ್ ಅಭಿಪ್ರಾಯ ಪಟ್ಟರು.
ತರೀಕೆರೆಯಲ್ಲಿ 1967 ರಲ್ಲಿ ನಡೆದ ಪ್ರಪ್ರಥಮ ರಾಜ್ಯ ಜಾನಪದ ಸಮ್ಮೇಳನದಲ್ಲಿ ಬಿಡುಗಡೆಯಾಗಿದ್ದ” ಹೊನ್ನ ಬಿತ್ತೇವು ಹೊಲಕೆಲ್ಲ” ಅಕರ ಗ್ರಂಥದ ಮರುಮುದ್ರಣದ ಪುಸ್ತಕಗಳನ್ನು ಖರೀದಿಸಿ ಮಾತನಾಡಿದರು.
ಅಂಚೆ ಪ್ರತಿಷ್ಠಾನದ ವತಿಯಿಂದ 25,000 ರೂಗಳ ಪುಸ್ತಕಗಳನ್ನು ಪಡೆದ ಅವರು ತರೀಕೆರೆ ತಾಲ್ಲೂಕಿನ ಎಲ್ಲರ ಮನೆಯಲ್ಲಿ, ಶಾಲೆಗಳಲ್ಲಿ ಮತ್ತು ಗ್ರಂಥಾಲಯದಲ್ಲಿ ಇಟ್ಟು ಕೊಂಡು ಓದುವ ಪುಸ್ತಕ ಇದಾಗಿದೆ ಎಂದರು.
ಸಮ್ಮೇಳನ ನಡೆದಾಗ 19 ವರ್ಷದ ಯುವಕನಾಗಿ ಬಹು ಹತ್ತಿರದಿಂದ ಗೊ.ರು.ಚನ್ನಬಸಪ್ಪ ಮತ್ತು ಜಾನಪದ ಕೋಗಿಲೆ ಕೆ.ಆರ್.ಲಿಂಗಪ್ಪ ಮತ್ತು ಊರಿನವರ ಸಹಕಾರದಿಂದ ಸಂಘಟನೆ ಎಲ್ಲರೂ ಮೆಚ್ಚುವಂತಾಯಿತು ಎಂದರಲ್ಲದೆ ಹೊನ್ನ ಬಿತ್ತೇವು ಹೊಲಕೆಲ್ಲ ಪುಸ್ತಕ ಇಂದಿಗೂ ಕೂಡ ಉತ್ಕೃಷ್ಟವಾಗಿದ್ದು ಇದರಿಂದ ವಿಶ್ವದ ಏಕೈಕ ಜಾನಪದ ವಿಶ್ವ ವಿದ್ಯಾಲಯ ರೂಪಿತವಾಗಿರುವುದು ತರೀಕೆರೆ ಗೆ ಕೀರ್ತಿ ತಂದಿದೆ ಎಂದರು.
ಸಮ್ಮೇಳನಕ್ಕೆ ಬಂದ ಮಹಾರಾಜರಾದ ನಾಲ್ವಡಿ ಜಯಚಾಮರಾಜೇಂದ್ರ ಒಡೆಯರ್ ಮತ್ತು ಸಾಹಿತಿಗಳು,ಕವಿಗಳು ಮತ್ತು ಕಲಾವಿದರ ಸ್ಪರ್ಶದಿಂದ ತರೀಕೆರೆ ತಾಲ್ಲೂಕಿಗೆ ಒಳ್ಳೆಯ ದಾಗಿದೆ.ಮತ್ತೆ ಈ ಪುಸ್ತಕ ಮರುಮುದ್ರಣ ಮಾಡಿದ ಎನ್.ರಾಜುರವರ ಕೆಲಸ ಇತ್ತೀಚಿನ ಪೀಳಿಗೆಯ ಜನರಿಗೆ ಸ್ಪೂರ್ತಿ ತರುತ್ತದೆ ಎಂದರಲ್ಲದೆ ಜಾನಪದ ರತ್ನ ಕೆ.ಆರ್.ಲಿಂಗಪ್ಪನವರ ನೂರನೆ ವರ್ಷದ ದಿವ್ಯ ಸ್ಮರಣೆ ಮಾಡಲು ಸೂಚಿಸಿದರು.
ತರೀಕೆರೆ ವಕೀಲರ ಸಂಘದ ಅಧ್ಯಕ್ಷರಾದ ದಿನೇಶ್ ಕುಮಾರ್ ಮಾತನಾಡಿ ಪುಸ್ತಕಗಳನ್ನು ಯಾರು ಬೇಕಾದರು ಮುದ್ರಿಸ ಬಹುದು ಆದರೆ ಪುಸ್ತಕಗಳನ್ನು ಓದಿ ಮನನ ಮಾಡಿಕೊಂಡು ಮುದ್ರಸಿದರೆ ಮಾತ್ರ ಬೆಲೆ ಬರುತ್ತದೆ. ಹೊನ್ನ ಬಿತ್ತೇವು ಹೊಲಕೆಲ್ಲ ಪುಸ್ತಕ ಬಹಳ ಉಪಯುಕ್ತವಾದದ್ದು ಇದನ್ನು ಕೊಂಡು ಓದಬೇಕು ಎಂದರು.
ಪುರಸಭಾ ಸದಸ್ಯ ಅಶೋಕ್ ಮಾತನಾಡಿ ನಮ್ಮೂರ ಹೆಮ್ಮೆಯನ್ನು ಹೆಚ್ಚಿಸಿದ ಇಂತಹ ಪುಸ್ತಕ ಮುದ್ರಣ ಮಾಡಿದ್ದಕ್ಕೆ ಕೃತಜ್ಞತೆ ತಿಳಿಸಿದರು.
ವಕೀಲರಾದ ಸುರೇಶ್ಚಂದ್ರ ವೀರಭದ್ರಯ್ಯ ಹರ್ಷ ವ್ಯಕ್ತಪಡಿಸಿದರು.ಹಿರಿಯ ಪತ್ರಕರ್ತ ಅನಂತ್ ನಾಡಿಗ್ ಈ ಕಾರ್ಯಕ್ರಮ ಹಮ್ಮಿಕೊಂಡ ಔಚಿತ್ಯ ಮತ್ತು ಪರಿಣಾಮಗಳ ಬಗ್ಗೆ ವಿವರಿಸಿ ಅಂಚೆ ಪ್ರತಿಷ್ಠಾನ ಇಂತಹ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯಾಗಿದೆ ಎಂದರು.
ಹಿರಿಯ ಪತ್ರಕರ್ತ ಅಂಚೆ ನಾಗಭೂಷಣ್ ಮತ್ತು ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
Develop a reading habit among young people
Leave a comment