ಚಿಕ್ಕಮಗಳೂರು: ಸರ್ಫೇಸಿ ಕಾಯ್ದೆ ಕಾಫಿ ಬೆಳೆಗಾರರಿಗೆ ಮರಣ ಶಾಸನವಾಗಿದ್ದು, ಬೆಳೆಗಾರರ ಜೊತೆ ಚೆಲ್ಲಾಟವಾಡದೆ ಕೇಂದ್ರಸರ್ಕಾರ ಈ ಕಾಯ್ದೆಯನ್ನು ರದ್ದುಮಾಡಿ, ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯ ಕಾಫಿಯ ಗುಣಮಟ್ಟ ಮತ್ತು ಬೆಳೆಗಾರರ ಬಗ್ಗೆ ಮನ್‌ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಬರಿ ಪ್ರಸ್ತಾಪ ಮಾಡಿದರೆ ಸಾಲದು ಬೆಳೆಗಾರರು ಸಂಕಷ್ಟದಲ್ಲಿದ್ದಾಗ ಅವರ ನೆರವಿಗೆ ಬರಬೇಕು. ಅಲ್ಲದೆ ಬೆಳೆಗಾರರಿಗೆ ಮರಣ ಶಾಸನವಾಗಿರುವ ಸರ್ಫೆಸಿ ಕಾಯಿದೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಪ್ರಮುಖ ಬೆಳೆ ಕಾಫಿ ಅತಿವೃಷ್ಟಿಯಿಂದ ಶೇ.೫೦-೬೦ ರಷ್ಟು ನೆಲಕಚ್ಚಿದ್ದು, ಕಾಫಿ ಬೆಳೆಯಿಂದ ಅಧಿಕ ವಿದೇಶಿವಿನಿಮಯ ಪಡೆಯುವ ಕೇಂದ್ರ ಸರಕಾರ ಬೆಳೆಗಾರರಿಗೆ ಆಗಿರುವ ನಷ್ಟ ಭರ್ತಿಮಾಡಿಕೊಡಬೇಕು ಈ ವರ್ಷ ಸುರಿದ ಮಳೆಯಿಂದ ಶೇ.೫೦-೬೦ ರಷ್ಟು ಅರೆಬಿಕಾ ಕಾಫಿ ಉದುರಿ ಹೋಗಿದೆ. ರೊಬಸ್ಟಾ ಸೆಟ್ ಆಗಲೇ ಇಲ್ಲ. ಇಂತಹ ಕ್ಲಿಷ್ಟಕರ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ತಿಳಿಸಿದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಇನ್ನು ೬ ತಿಂಗಳಲ್ಲಿ ಸರ್ಫೆಸಿ ಕಾಯಿದೆ ರದ್ದು ಮಾಡಿಸುವುದಾಗಿ ಸಮಾರಂಭದಲ್ಲಿ ಹೇಳಿದ್ದರು. ಆದರೆ ವರ್ಷ ಕಳೆದರೂ ಬೆಳೆಗಾರರ ಹರಾಜು ಪ್ರಕ್ರಿಯೆ ಮುಂದುವರಿದಿದೆ. ಚಿಕ್ಕಮಗಳೂರು ಬೇಲೂರು ರಸ್ತೆ ಅಭಿವೃದ್ಧಿಪಡಿಸುವುದಾಗಿಯೂ ಸಂಸದರು ಹೇಳಿದ್ದರು, ಆ ಕೆಲಸವೂ ಆಗಿಲ್ಲ. ಹೀಗಾಗಿ ಹಿಂದಿನ ಸಂಸದೆ ಶೋಭಾ ಕರಂದ್ಲಾಜೆಯಂತೆ ಇವರೂ ನಮ್ಮ ಕಿವಿಗೆ ಹೂ ಮುಡಿಸುವುದು ಬೇಡ. ಸುಳ್ಳು ಹೇಳುವುದನ್ನು ನಿಲ್ಲಿಸಿ ನುಡಿದಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಅವರ ವಿರುದ್ಧವೂ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಪದ ಬಳಿಸಿರುವ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಇನ್ನಾದರೂ ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
ಸಂಸದರು, ಮುಖ್ಯಮಂತ್ರಿಗಳು, ಅರಣ್ಯ, ಕಂದಾಯ ಸಚಿವರಿಗೆ ಸಧ್ಯದಲ್ಲೇ ಕಾಫಿ ಬೆಳೆಯುವ ಪ್ರದೇಶಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ಈ ಮೂರು ಜಿಲ್ಲೆಗಳ ಬೆಳೆಗಾರರ ಸಂಘಟನೆ ನೇತೃತ್ವದಲ್ಲಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಮಹಮದ್ ಅಕ್ಬರ್, ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ ಉಪಸ್ಥಿತರಿದ್ದರು.
Devaraj demands repeal of SARFAESI Act
Leave a comment