ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸೂರ್ಯನ ದರ್ಶನವೇ ಇಲ್ಲದಂತಾಗಿದ್ದು, ಥಂಡಿ ವಾತಾವರಣ ಉಂಟಾಗಿದ್ದು, ಶೀತಗಾಳಿ ಬೀಳಲಾರಂಭಿಸಿದೆ.
ಮಲೆನಾಡು ಮತ್ತು ಬಯಲು ಭಾಗದಲ್ಲಿ ದಟ್ಟವಾದ ಮಂಜಿನಿಂದ ಆವೃತವಾಗಿದೆ. ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ, ಕಳಸ ಹಾಗೂ ಚಾರ್ಮಾಡಿ ಘಾಟಿ ಪ್ರದೇಶಗಳಲ್ಲಿ ಮಂಜು ಎಷ್ಟು ದಟ್ಟವಾಗಿದೆ ಎಂದರೆ ಎದುರಿಗಿರುವ ರಸ್ತೆಯೇ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಶೇಷವಾಗಿ ಕಳಸ ಭಾಗವು ಮಂಜಿನ ನಡುವೆ ಸಂಪೂರ್ಣವಾಗಿ ಕಳೆದುಹೋಗಿದ್ದು, ಈ ದೃಶ್ಯಗಳು ಡೋನ್ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಯಾಗಿವೆ. ಗಿರಿಶಿಖರಗಳು ಮತ್ತು ಗುಡ್ಡಗಾಡು ಪ್ರದೇಶಗಳು ಮಂಜಿನಿಂದ ಕೂಡಿ ಹೊಸದೊಂದು ಲೋಕದಂತೆ ಭಾಸವಾಗುತ್ತಿವೆ.
ಈ ದಟ್ಟ ಮಂಜಿನಿಂದಾಗಿ ಚಾರ್ಮಾಡಿ ಘಾಟಿ ಮತ್ತು ಮುಳ್ಳಯ್ಯನಗಿರಿ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಗಲು ಹೊತ್ತಿನಲ್ಲೇ ಕಡ್ಡಾಯವಾಗಿ ಹೆಡ್‌ಲೈಟ್ ಹಾಗೂ ಫಾಗ್ ಲೈಟ್‌ಗಳನ್ನು ಹಾಕಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ ಎರಡು ದಿನಗಳಿಂದ ಸತತವಾಗಿ ಬೀಸುತ್ತಿರುವ ಶೀತ ಗಾಳಿ ಮತ್ತು ಭಾರೀ ಚಳಿಗೆ ಮಲೆನಾಡಿಗರು ಕಂಗಾಲಾಗಿದ್ದಾರೆ. ಮಂಜಿನ ಈ ಅಬ್ಬರ ಪ್ರವಾಸಿಗರಿಗೆ ಮುದ ನೀಡುತ್ತಿದ್ದರೂ, ದೈನಂದಿನ ಜನಜೀವನ ಮತ್ತು ವಾಹನ ಸಂಚಾರದ ಮೇಲೆ ಭಾರೀ ಪರಿಣಾಮ ಬೀರಿದೆ.
ರೋಗಿಗಳು ಮತ್ತು ವೃದ್ಧರು ಮನೆಯಿಂದ ಹೊರಬಾರದಂತಾಗಿದ್ದು, ಬೆಚ್ಚನೆಯ ಉಡುಪು, ಹೊದಿಕೆ ಹೊದ್ದುಕೊಂಡು ಬೆಂಕಿಕಾಯಿಸುವಂತ ಪರಿಸ್ಥಿತಿ ಉಂಟಾಗಿದೆ. ಮಧ್ಯಾಹ್ನ ಸ್ವಲ್ಪ ಹೊತ್ತು ಬಿಸಿಲಿನ ಕಿರಣ ಭೂಮಿಗೆ ತಾಕಿತಾಗಿದ್ದರೂ ಇಡೀ ದಿನ ದಟ್ಟ ಮಂಜು ಆವರಿಸಿದೆ. ಮನೆಯ ಪಕ್ಕದಲ್ಲಿ ಪ್ಲಾಸ್ಟಿಕ್ ಮೇಲೆ ಹರಡಿದ್ದ ಕಾಫಿಬೀಜವನ್ನು ಮುದಿರಿಡುವ ಪರಿಸ್ಥಿತಿ ಉಂಟಾಗಿದೆ
Dense fog in the hilly areas of the coffee country
Leave a comment