ಚಿಕ್ಕಮಗಳೂರು: ಗುರುದತ್ತಾತ್ರೇಯ ಸ್ವಾಮಿ ಬಾಬಾಬುಡನ್‌ಗಿರಿ ದರ್ಗಾ ವ್ಯಾಪ್ತಿಯ ಸಂಚಾರಕ್ಕೆ ಸ್ಥಳೀಯ ನಿವಾಸಿಗಳಿಗೆ ಪಾಸ್ ಕಡ್ಡಾಯ ಮಾಡಲು ಮುಂದಾಗಿರುವ ಜಿಲ್ಲಾಡಳಿತದ ನಿರ್ಧಾರವನ್ನು ರದ್ದುಪಡಿಸುವಂತೆ ಎದ್ದೇಳು ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಂಚಾಲಕ ಗೌಸ್‌ಮೊಯುದ್ದೀನ್ ಮಾತನಾಡಿ, ಗುರುದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾ ಸರ್ವಧರ್ಮಿಯರ ಸೌಹಾರ್ದ ಕೇಂದ್ರವಾಗಿದೆ. ಜತೆಗೆ ಸುತ್ತಮುತ್ತ ಹತ್ತಾರು ಪ್ರವಾಸಿ ತಾಣಗಳಿವೆ. ಪ್ರವಾಸಿ ಸ್ಥಳ ವೀಕ್ಷಣೆಗೆ ಬರುವ ಹೊರಗಿನವರಿಗೆ ಆನ್‌ಲೈನ್ ಪ್ರವೇಶ ನೀಡಲು, ಸ್ಥಳೀಯರಿಗೆ ಪಾಸ್ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಹೇಳಿದರು.
ಈ ವಿಚಾರದಲ್ಲಿ ಸ್ಥಳೀಯ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ. ಈ ರೀತಿ ಸ್ಥಳೀಯರಿಗೆ ಪಾಸ್ ನೀಡಿದರೆ ಆ ಭಾಗದಲ್ಲಿರುವ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ಕಾರ್ಮಿಕರು ಬರುವುದ ಹೇಗೆ? ಮದುವೆ, ಮುಂಜಿ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾವುನೋವುಗಳಾದಾಗ ಹೊರಗಿನ ಸಂಬಂಧಿಕರು ತಮ್ಮವರನ್ನು ಭೇಟಿ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ನಮ್ಮ ಊರು, ನಮ್ಮ ಮನೆಗೆ ಅನುಮತಿ ಪಡೆದು ಬರುವಂತಾಗುತ್ತದೆ. ಇದು ಮಾನವನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದರು. ಜಿಲ್ಲಾಡಳಿತ ಈ ನಿರ್ಧಾರವನ್ನು ಕೈಬಿಡದಿದ್ದರೆ ಆ.೧೩ ರಂದು ಜಿಲ್ಲಾ ಕೇಂದ್ರದಲ್ಲಿ ತೀವೃತರದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶ್ರೀ ಗುರುದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾದಲ್ಲಿ ಸಂಘಪರಿವಾರ ಹುಟ್ಟು ಹಾಕಿರುವ ವಿವಾದಕ್ಕೆ ಒಂದು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಈಗ ದತ್ತಪೀಠದಲ್ಲಿರುವ ಈಗಿರುವ ಸಮಿತಿಯನ್ನು ರದ್ದುಮಾಡಿ ಎರಡೂ ಪಂಗಡದವರು ಸಮಾನವಾಗಿರುವ ಪಾರದರ್ಶಕ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಆಶಾಸಂತೋಷ್, ದಿವಾಕರ, ರೀತು, ಪುಟ್ಟಸ್ವಾಮಿ, ವೀಣಾ, ಗಣೇಶ್, ಚಂದು, ಪಾಷಾ ಮತ್ತಿತರರಿದ್ದರು
Demand to cancel the decision to make passes mandatory to visit Giri
Leave a comment