ಚಿಕ್ಕಮಗಳೂರು : ದೇಶದಲ್ಲಿ ನಾಲ್ಕು ವಿಧವಾದ ಹೀರೋಗಳಿದ್ದಾರೆ ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ನನ್ನ ಪಾಲಿಗೆ ಸೂಪರ್ ಹೀರೋಗಳು ಎಂದು ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ಪಟು ವೇದ ಕೃಷ್ಣಮೂರ್ತಿ ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ಎರಡು ದಿನಗಳ ವಾರ್ಷಿಕ ಪೊಲೀಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು, ಪ್ರಸ್ತುತ ದೇಶವನ್ನು ಕಾಪಾಡುತ್ತಿರುವ ಸೈನಿಕರು, ದೇಶದ ಕ್ರೀಡಾಪಟುಗಳು ಹಾಗೂ ಪೊಲೀಸರು ಇವರುಗಳು ದೇಶದ ಹೀರೋಗಳು ಎಂದು ವೇದ ಕೃಷ್ಣಮೂರ್ತಿ ನುಡಿದರು.
ನಾನು ಕ್ರಿಕೆಟ್ ಆಡಲು ಪ್ರಪಂಚದ ಬೇರೆ ಬೇರೆ ಶ್ರೀಮಂತ ದೇಶಗಳಿಗೆ ಹೋಗಿ ನೋಡಿದ್ದೇನೆ, ಆದರೆ ಚಿಕ್ಕಮಗಳೂರು ಜಿಲ್ಲೆಯಂತಹ ಪ್ರದೇಶ ಪ್ರಪಂಚದಲ್ಲೇ ಎಲ್ಲೂ ನೋಡಿಲ್ಲ ಎಂದು ವೇದ ಜಿಲ್ಲೆಯನ್ನು ಬಣ್ಣಿಸಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ ಅತ್ಯಂತ ಸುರಕ್ಷಿತ ಜಿಲ್ಲೆ ನಮ್ಮದು, ಇಲ್ಲಿನ ಜನರು ಪ್ರೀತಿ, ಪ್ರೇಮ, ವಾತ್ಸಲ್ಯ ಮನೋಭಾವನೆ ಹೊಂದಿರುವ ಜನರು ಮತ್ತೆಲ್ಲೂ ಸಿಗುವುದಿಲ್ಲ ಎಂದು ವೇದ ಕೃಷ್ಣಮೂರ್ತಿ ವ್ಯಾಖ್ಯಾನಿಸಿದ್ದಾರೆ.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಜಿಲ್ಲಾ ಪಂಚಾಯಿತಿ ಸಿಇಓ ಎಚ್ಎಸ್ ಕೀರ್ತನ, ಸೇರಿದಂತೆ ಹಲವು ಗಣ್ಯರು ಬಲೂನ್ ಹಾಗೂ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲೆಯ ಹಲವೆಡೆ ಗಳಿಂದ ಆಗಮಿಸಿದ್ದ ಪೊಲೀಸ್ ಕ್ರೀಡಾಪಟುಗಳು ಆಕರ್ಷಕ ಪತಸಂಚಲನ ನಡೆಸಿದರು. ಐದು ಬಾರಿಯ ಆ ಚಾಂಪಿಯನ್ ಗಿರೀಶ್ ಕ್ರೀಡಾ ಜ್ಯೋತಿಯನ್ನು ವೇದ ಕೃಷ್ಣ ಮೂರ್ತಿಗೆ ಹಸ್ತಾಂತರಿಸಿದರು. ಇಂದು ಮತ್ತು ನಾಳೆಯೂ ವಿವಿಧ ಕ್ರೀಡೆಗಳು ಡಿಎಆರ್ ಮೈದಾನದಲ್ಲಿ ನಡೆಯಲಿವೆ
Leave a comment