ಚಿಕ್ಕಮಗಳೂರು: ಜಿಲ್ಲೆಯ ಕಂದಾಯ, ಅರಣ್ಯ ಭೂಮಿ ಸಮಸ್ಯೆ, ಕಾಡಾನೆ, ಶೋಷಿತ, ದುರ್ಬಲರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಜಿಲ್ಲಾಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪಕ್ಷಾತೀತವಾದ ಸಭೆ ಕರೆಯುವ ಪ್ರಯತ್ನ ಮಾಡುವುದಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ತಾಲೂಕಿನ ಹಂಗರವಳ್ಳಿಯಲ್ಲಿ ಗುರುವಾರ ಏರ್ಪಡಿಸಿದ್ದ ಆವತಿ ಹೋಬಳಿ ಮಟ್ಟದ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು. ಕಂದಾಯ ಮತ್ತು ಅರಣ್ಯ ಭೂಮಿ ಸಮಸ್ಯೆಗಳು ಕೆಲವು ಕೇಂದ್ರ ಮತ್ತು ರಾಜ್ಯ ಸರಕಾರದ ವ್ಯಾಪ್ತಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಅಕಾರಿಗಳು, ಜನಪ್ರತಿನಿಗಳು ಒಟ್ಟಾಗಿ ಕುಳಿತು ಮುಂದಿನ ತಲೆಮಾರಿಗೆ ಅನುಕೂಲ ಆಗುವಂತೆ ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕು. ಇಲ್ಲದಿದ್ದರೆ ಹಿಂದಿನಿಂದ ಇರುವ ಮೂಲ ಸಮಸ್ಯೆಗಳಿಗೆ ಮುಕ್ತಿ ದೊರೆಯುವುದಿಲ್ಲ ಎಂದು ಹೇಳಿದರು.
ಸರ್ಫೆಸಿ ಕಾಯಿದೆಯಿಂದ ಕಾಫಿ ಹೊರಗಿಡಬೇಕು ಎಂಬ ಪ್ರಯತ್ನ ನಡೆದಿದೆ. ಈಗಾಗಲೇ ಒಂದು ಪ್ಯಾಕೇಜ್ ಕೊಡಿಸುವ ಮೂಲಕ ಅನೇಕ ಬೆಳೆಗಾರರಿಗೆ ಅನುಕೂಲ ಆಗಿದೆ. ಒಟ್ಟಾರೆ ಜಿಲ್ಲೆಯ ಸಮಸ್ಯೆಗಳನ್ನು ಪಕ್ಷಾತೀತವಾಗಿ ಅಕಾರಿ, ಜನಪ್ರತಿನಿಗಳು ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ ಎಂದರು.
ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ ಮಾತನಾಡಿ, ಕಾಫಿ ಧಾರಣೆ ಮತ್ತಿತರೆ ವಿದ್ಯಾಮಾನಗಳ ಬಗ್ಗೆ ಬೆಳೆಗಾರರು ಮಂಡಳಿ ಆಯೋಜಿಸುವ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅರಿವು ಮೂಡಿಸಿಕೊಳ್ಳಬೇಕು. ಸರ್ಫೆಸಿ ಕಾಯಿದೆಯಿಂದ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕೇಂದ್ರ ಅರ್ಥ, ವಾಣಿಜ್ಯ ಸಚಿವರ ಬಳಿ ಮಾತಾಡಿದ್ದೇನೆ. ಸಾಲ ವಸೂಲಾತಿಗೆ ಡಿಆರ್‌ಟಿ ಇರಲಿ ಆದರೆ ಸರ್ಫೆಸಿ ಬೇಡ. ಇದರಿಂದ ಲ್ಯಾಂಡ್ ಮಾಫಿಯಾ ಶುರುವಾಗುತ್ತದೆ ಎಂದು ಸಚಿವರಲ್ಲಿ ಮನವರಿಕೆ ಮಾಡಿದ್ದೇವೆ. ಕಾಡಾನೆ ಹಾವಳಿ ಸಮಸ್ಯೆಗೆ ವೈಜ್ಞಾನಿಕವಾದ ಸಂಶೋಧನೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ನಾಗರೀಕ ರೈತ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿನಮೂನೆ ೫೭ ರಲ್ಲಿ ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ನೂರಾರು ಮಂದಿ ರೈತರು ಕಾಯುತ್ತಿದ್ದಾರೆ. ಆದರೆ, ನಮೂನೆ ೫೭ ಪ್ಲಾಂಟೇಶನ್ ಭೂಮಿಗೆ ಅನ್ವಯವಾಗುವುದಿಲ್ಲ ಎಂದು ಸರಕಾರ ಹೇಳಿದೆ. ಇದರಿಂದ ನೂರಾರು ಅರ್ಜಿಗಳು ಈಗಾಗಲೇ ವಜಾಗೊಂಡಿವೆ.
ಈ ಸಮಸ್ಯೆಯ ಬಗ್ಗೆ ಸದನದಲ್ಲಿ ದನಿ ಎತ್ತಿ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಮನವಿ ಮಾಡಿದರು. ಆವತಿ ಹೋಬಳಿ ಒಂದರಲ್ಲೇ ಮೂರುವರೆ ಸಾವಿರ ಹೆಕ್ಟೇರ್ ಡೀಮ್ಡ್ ಭೂಮಿ ಇದೆ. ಇಲ್ಲಿಂದ ಹೋದ ಪ್ರತಿ ಬೆಳೆಗಾರನೂ ಹೋರಾಟದ ಕಿಚ್ಚು ಬೆಳೆಸಿಕೊಂಡಲ್ಲಿ ಮಾತ್ರ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಬೈಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘದ ಅಧ್ಯಕ್ಷ ಅರುಣ್‌ಕುಮಾರ್, ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್‌ಕುಮಾರ್, ದಯಾಕರ, ಶ್ರೀಧರ್, ಮಹೇಂದ್ರ, ದೀಪಕ್ ದೊಡ್ಡಯ್ಯ, ಕೆರಮಕ್ಕಿ ಮಹೇಶ್, ತುಳಸೇಗೌಡ, ರಾಜು, ದಿಲೀಪ್, ಮೈಲಿಮನೆ ಪೂರ್ಣೇಶ್‌ಮತ್ತಿತರರಿದ್ದರು.
Avati hobli level farmers’ conference in Hangaravalli
Leave a comment