ಚಿಕ್ಕಮಗಳೂರು: ದೇಸಿ ತಳಿಗಳನ್ನು ಬಳಸಿ ಕೃಷಿ ಮಾಡುತ್ತಿರುವ ರೈತರಿಗೆ ಉತ್ತೇಜನ ನೀಡಲು ಕೃಷಿ ಇಲಾಖೆಯು ಜಿಲ್ಲೆಯಲ್ಲಿ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರೈತರ ನೋಂದಣಿಗೆ ಮೊಬೈಲ್ ಆಪ್ ಬಿಡುಗಡೆ ಮಾಡಲಾಗಿದೆ.
ಸ್ಥಳೀಯ ತಳಿಗಳು ಅಥವಾ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ನಿರ್ವಹಿಸಲ್ಪಡುವ ತಳಿಗಳು ದೇಸಿ ತಳಿಗಳೆಂದು ಕರೆಯಲ್ಪಡುತ್ತವೆ. ಇವು ರೈತರ ಸಾಂಪ್ರದಾಯಿಕ ಮತ್ತು ಪರಂಪರೆ ಪ್ರಭೇದಗಳಾಗಿವೆ. ಈ ತಳಿಗಳಲ್ಲಿರುವ ವಿಶಿಷ್ಟ ಗುಣಲಕ್ಷಣಗಳು ಮತ್ತು ಭೌಗೋಳಿಕ ಮೂಲಗಳ ಕಾರಣದಿಂದ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ಅಧಿಸೂಚಿತ ಪ್ರಭೇದಗಳಿಗಿಂತ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ದವಾಗಿವೆ.
ದೇಸಿ ತಳಿಗಳನ್ನು ಸಂರಕ್ಷಿಸಿ ಮತ್ತು ಬೆಳೆಸುವ ಮೂಲಕ ಕೃಷಿ ಪರಂಪರೆಯನ್ನು ಮುಂದುವರಿಸುತ್ತಿರುವ ರೈತರನ್ನು ಗುರುತಿಸುವುದು ಮತ್ತು ಉತ್ತೇಜಿಸುವುದನ್ನು ಮನಗಂಡು ಕೃಷಿ ಇಲಾಖೆಯು ದೇಸಿ ತಳಿಗಳ ನಿರಂತರ ಕೃಷಿಯನ್ನು ಪ್ರೋತ್ಸಾಹಿಸಲು, ಜೀವ ವೈವಿಧ್ಯತೆಯನ್ನು ಬೆಂಬಲಿಸಲು ಹಾಗೂ ಸುಸ್ಥಿರ ಕೃಷಿ ಪದ್ಧತಿ ಪೋಷಿಸಲು ಈ ಉತ್ತೇಜನ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿದೆ. ಕಣ್ಮರೆಯಾಗುತ್ತಿರುವ ತಳಿಗಳನ್ನು ಸಂರಕ್ಷಿಸುವುದರ ಜೊತೆಗೆ ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳ ಗುರುತಿಸುವಿಕೆ ಹಾಗೂ ಸಂರಕ್ಷಣೆ ಗುರಿಯನ್ನು ಹೊಂದಲಾಗಿದೆ. ದೇಸಿ ತಳಿಗಳನ್ನು ಹಿಂದಿನಿಂದಲೂ ಸಂರಕ್ಷಿಸಿ ಕೃಷಿ ಮಾಡುತ್ತಿರುವ ರೈತರಿಗೆ ಬೆಂಬಲ ನೀಡುವ ಜೊತೆಗೆ ದೇಸಿ ತಳಿಗಳ ಜನಪ್ರಿಯತೆಗೆ ಬೆಂಬಲ ನೀಡುವ ಸಂಕಲ್ಪ ಮಾಡಲಾಗಿದೆ.
ಕೃಷಿ ಇಲಾಖೆ ವತಿಯಿಂದ ದೇಸಿ ತಳಿ ಸಂರಕ್ಷಿಸುತ್ತಿರುವ ರೈತರನ್ನು ಗುರುತಿಸಲು ಮತ್ತು ಅಂತಹ ರೈತರ ನೋಂದಣಿಗಾಗಿ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದು, ಆಸಕ್ತ ರೈತರು ತಮ್ಮ ಸಮೀಪದ ಕೃಷಿ ಇಲಾಖೆ ಕಚೇರಿಗೆ ಮೇ ೩೦ ರೊಳಗೆ ಭೇಟಿ ನೀಡುವಂತೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಸುಜಾತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Agriculture Department launches mobile app for farmer registration
Leave a comment