ಮೂಡಿಗೆರೆ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿರುವ ‘ಫಸ್ಟ್ ಬ್ಯಾಂಕ್ ರಾಜು’ ಖ್ಯಾತಿಯ ನಟ ಗುರುನಂದನ್ ಅವರ ರೆಸಾರ್ಟ್‌ಗೆ ಒಂಟಿ ಸಲಗವೊಂದು ಲಗ್ಗೆ ಇಟ್ಟಿದೆ.
ರೆಸಾರ್ಟ್ ಕಾರಿಡಾರ್‌ನಲ್ಲಿ ರಾಜಾರೋಷವಾಗಿ ಓಡಾಡಿರುವ ಆನೆ, ಬಿರು ಬೇಸಿಗೆಯ ದಾಹಕ್ಕೆ ದಣಿವಾರಿಸಿಕೊಳ್ಳಲು ಈಜುಕೊಳದ ನೀರನ್ನೇ ಕುಡಿದು ಲಾನ್ ಮೇಲೆ ಓಡಾಟ ನಡೆಸಿರುವ ದೃಶ್ಯಗಳು ಅಲ್ಲಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಪ್ರತಿ ವರ್ಷ ಬೇಸಿಗೆಯ ಅವಧಿಯಲ್ಲಿ ಈ ಭಾಗಕ್ಕೆ ಕಾಡಾನೆಗಳ ಕಾಟ ಹೆಚ್ಚಾಗುತ್ತಿದ್ದು, ಒಮ್ಮೊಮ್ಮೆ 20 ರಿಂದ 30 ಆನೆಗಳ ಹಿಂಡು ಬಂದು ತೋಟ ಮತ್ತು ಮನೆಗಳಿಗೆ ಹಾನಿ ಮಾಡುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಸ್ಥಳೀಯ ನಿವಾಸಿಗಳು ಮತ್ತು ಕೃಷಿಕರು ನಿರಂತರವಾಗಿ ತೊಂದರೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂಬ ದೂರು ಕೇಳಿ ಬಂದಿದೆ.
ಆನೆಗಳ ದಂಡು ಪದೇ ಪದೇ ಗ್ರಾಮಕ್ಕೆ ನುಗ್ಗುತ್ತಿರುವುದರಿಂದ ಜನರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಎದುರಾಗಿದೆ. ವನ್ಯಜೀವಿಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
A lone wolf attacks the resort of the actor of ‘First Bank Raju’ fame
Leave a comment