ಚಿಕ್ಕಮಗಳೂರು: ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಬೇಕೆಂದು ದೊಡ್ಡ ಷಡ್ಯಂತ್ರ ನಡೆದಿದೆ ಎಂದು ವಿದಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ನಾವೆಲ್ಲ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರನ್ನು ದೇವತಾ ಮನುಷ್ಯ ಎಂದೇ ಭಾವಿಸುತ್ತೇವೆ. ಅವರ ಬದುಕಿಗೆ ಅಷ್ಟು ಸ್ಪಷ್ಟತೆ, ಪರೋಪಕಾರದ ಜೀವನ ಇದೆ. ನಮ್ಮ ಸಮಾಜ ವ್ಯವಸ್ಥೆಯಲ್ಲಿ ಚಿಪ್ಪಿನಲ್ಲಿ ಕಾಫಿ ಕೊಡುವ ಸಂದರ್ಭದಲ್ಲಿ ಅವರು ಸಹಪಂಕ್ತಿ ಬೋಜನ ಏರ್ಪಾಡು ಮಾಡಿ ಸಮಾನತೆ ಎತ್ತಿ ಹಿಡಿದರು. ಎಷ್ಟೋ ಕುಟುಂಬಗಳು ಧರ್ಮಸ್ಥಳ ವ್ಯಸನ ಮುಕ್ತಿ ಕೇಂದ್ರದಿಂದ ಕುಡಿತ ಬಿಟ್ಟು ಬದುಕು ಕಟ್ಟಿಕೊಂಡಿವೆ.
ಲಕ್ಷಾಂತರ ಕುಟುಂಬಗಳು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನೆರವಿನಲ್ಲಿ ಬದುಕು ಕಟ್ಟಿಕೊಂಡಿವೆ. ಸಾವಿರಾರು ದೇವಾಲಯ ಪುರುತ್ಥಾನಗೊಂಡಿವೆ ಎಂದರು.
ಇನ್ನು ಆತ್ಮಹತ್ಯೆ, ಅಪರಿಚಿತ ಶವ ಇನ್ನಿತರೆ ಬಗ್ಗೆ ಯಾವುದೇ ತನಿಖೆ ನಡೆಯಲಿ. ಕೆಲವರು ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳನ್ನೇ ಅಪರಾಧಿಯನ್ನಾಗಿಸಲು ಷಡ್ಯಂತ್ರ ನಡೆಸಿದ್ದಾರೆ. ಕಮ್ಯುನಲ್ ಮತ್ತು ಕ್ರಿಮಿನಲ್ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಎಸ್ಡಿಪಿಐ ಸಹ ಇದರಲ್ಲಿ ಸೇರಿಕೊಂಡಿದೆ ಎಂದರು.
ಇದರಲ್ಲಿ ಹಲವು ಮಾಫಿಯಾಗಳು ಕೆಲಸ ಮಾಡುತ್ತಿವೆ. ಧಾರ್ಮಿಕ ಶ್ರದ್ಧೆ ಕಾರಣಕ್ಕೆ ಮತಾಂತರದ ಮಾಫಿಯಾಕ್ಕೆ ಫಲ ಸಿಗುವುದಿಲ್ಲ ಅದಕ್ಕಾಗಿ ಅವರು ಹಿಂದೆ ಶಬರಿಮಲೈ ಅನ್ನು ಗುರಿ ಮಾಡಿಕೊಂಡಿದ್ದರು. ಇನ್ನೂ ಕೆಲವು ಸದಾ ಸುದ್ದಿಯಲ್ಲಿರಬೇಕು ಎನ್ನುವವರು, ಮತ್ತು ಅರಾಜಕತೆ ಹುಟ್ಟುಹಾಕಬೇಕು ಎನ್ನುವವರು ಹಾಗೂ ನಗರ ನಕ್ಸಲರ ಷಡ್ಯಂತ್ರ ಇದರಲ್ಲಿದೆ. ಈಗಾಗಲೇ ಆರೋಗ್ಯ ಸಚಿವರು ಎಡಪಂಥೀಯರ ಒತ್ತಡದಿಂದ ಎಸ್ಐಟಿ ನೇಮಿಸಿದ್ದೇವೆ ಎಂದಿದ್ದಾರೆ. ಸತ್ಯಾಸತ್ಯತೆ ಇದೆ ಎಂದು ಅವರಿಗೆ ಅನ್ನಿಸಲಿಲ್ಲ ಎಂದು ದೂರಿದರು.
A big conspiracy to bring a bad name to Dharmasthala
Leave a comment