ಚಿಕ್ಕಮಗಳೂರು: ಕ್ರೀಡಾ ಚಟುವಟಿಕೆಗಳಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಸದೃಢತೆಯೂ ವೃದ್ಧಿಯಾಗುತ್ತದೆ. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಸೋಮವಾರ ರಾಣಾ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ದಿವಂಗತ ಮಾತೃಶ್ರೀ ಗೌರಮ್ಮ ಬಸವೇಗೌಡ ಅವರ ಸ್ಮರಣಾರ್ಥ ಆಯೋಜಿಸಿರುವ 9ನೇ ಆವೃತ್ತಿಯ ಚಿಕ್ಕಮಗಳೂರು ಪ್ರೀಮಿಯರ್ ಲೀಗ್ (ಸಿಪಿಎಲ್) ವೈಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್-2026 ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಕ್ರಿಕೆಟ್ಗೆ ಅಪಾರ ಜನಪ್ರಿಯತೆ ಮತ್ತು ಅಭಿಮಾನಿಗಳಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ, ರಾಹುಲ್ ದ್ರಾವಿಡ್ ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಪ್ರಸ್ತುತ ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್ಗಳು ವಿಶ್ವದ ಬ್ಯಾಟ್ಸ್ಮನ್ಗಳಿಗೆ ಸವಾಲಾಗಿದ್ದಾರೆ. ಕ್ರೀಡೆಯು ಯುವಕರಲ್ಲಿ ಶಿಸ್ತು, ಆತ್ಮವಿಶ್ವಾಸ, ದೈಹಿಕ ಸಾಮರ್ಥ್ಯ ಹಾಗೂ ತಂಡದ ಮನೋಭಾವ ಬೆಳೆಸುತ್ತದೆ ಎಂದರು.
ಕಳೆದ ಒಂಬತ್ತು ವರ್ಷಗಳಿಂದ ನಿರಂತರವಾಗಿ ಚಿಕ್ಕಮಗಳೂರು ಪ್ರೀಮಿಯರ್ ಲೀಗ್ ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ಆಟಗಾರರೂ ಅಭಿನಂದನೆಗೆ ಅರ್ಹರು. ಗೆಲುವು ಮತ್ತು ಸೋಲು ಕ್ರೀಡೆಯ ಸಹಜ ಭಾಗವಾಗಿದ್ದು, ಕ್ರೀಡಾಸ್ಫೂರ್ತಿಯಿಂದ ಆಟವಾಡಬೇಕು. ತೀರ್ಪುಗಾರರು ಯಾವುದೇ ಒತ್ತಡ ಅಥವಾ ಪಕ್ಷಪಾತಕ್ಕೆ ಒಳಗಾಗದೆ ಆಟಗಾರರ ಕ್ರೀಡಾ ಕೌಶಲ್ಯವನ್ನು ಗುರುತಿಸಿ ಪ್ರಾಮಾಣಿಕವಾಗಿ ತೀರ್ಪು ನೀಡಬೇಕು. ಗೆದ್ದವರು ಅತಿಯಾಗಿ ಸಂಭ್ರಮಿಸಬಾರದು, ಸೋತವರು ನಿರಾಶರಾಗಬಾರದು. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಅರಿತು ಮುಂದಿನ ಸ್ಪರ್ಧೆಗೆ ಸಿದ್ಧರಾಗಬೇಕು ಎಂದು ಸಲಹೆ ನೀಡಿದರು.
ಚಿಕ್ಕಮಗಳೂರಿನಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಉದ್ದೇಶದಿಂದ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಂದಾವರ ಬಡಾವಣೆಯಲ್ಲಿ ಎಂಟು ಎಕರೆ ಜಾಗವನ್ನು ಮೀಸಲಿಡಲಾಗಿದೆ. ಬಡಾವಣೆಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಬಳಿಕ ಜಾಗವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್ಸಿಎ) ಹಸ್ತಾಂತರಿಸಿ, ಆದಷ್ಟು ಶೀಘ್ರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳೆದ ನಾಲ್ಕೂವರೆ ವರ್ಷಗಳಿಂದ ಸ್ಥಗಿತಗೊಂಡಿದ್ದ ನಗರದ ಶತಮಾನೋತ್ಸವ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಗೆ ಮರುಚಾಲನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಬಿಡುಗಡೆಯಾಗಿದ್ದ ಅನುದಾನದ ಜೊತೆಗೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ವಿವಿಧ ಮೂಲಗಳಿಂದ ಹೊಂದಿಸಿ ಕಾಮಗಾರಿ ಕೈಗೊಳ್ಳಲಾಗಿದೆ. ಜನವರಿ 26ರ ಗಣರಾಜ್ಯೋತ್ಸವದ ವೇಳೆಗೆ ಕ್ರೀಡಾಂಗಣವನ್ನು ಉದ್ಘಾಟಿಸುವ ಗುರಿ ಹೊಂದಲಾಗಿದೆ. ಅನಿವಾರ್ಯ ಕಾರಣಗಳಿಂದ ವಿಳಂಬವಾದಲ್ಲಿ ಜನವರಿ 27ರಂದು ಲೋಕಾರ್ಪಣೆಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಕ್ರೀಡಾಪಟುಗಳೇ ಸ್ವಂತ ಹಣ ಖರ್ಚು ಮಾಡಿ ಆಟದ ಮೈದಾನವನ್ನು ಸಿದ್ಧಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮೈದಾನ ಬಳಕೆಗೆ ಕ್ರೀಡಾ ಇಲಾಖೆಯಿಂದ ಯಾವುದೇ ಶುಲ್ಕ ವಿಧಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿ ಉಚಿತವಾಗಿ ಮೈದಾನ ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಹಿರಿಯ ತರಬೇತುದಾರ ಫ್ರಾನ್ಸಿಸ್ ಮಾತನಾಡಿ, ಎಲ್ಲಾ ತಂಡಗಳು ಕ್ರೀಡಾಸ್ಫೂರ್ತಿಯಿಂದ ಆಟವಾಡಬೇಕು. ಅಂಪೈರ್ಗಳು ನಿಷ್ಪಕ್ಷಪಾತವಾಗಿ ತೀರ್ಪು ನೀಡಬೇಕು. ಹಿಂದಿನ ಪಂದ್ಯಾವಳಿಗಳಲ್ಲಿಯೂ ಉತ್ತಮ ಆಟ ಪ್ರದರ್ಶಿಸಲಾಗಿದ್ದು, ಈ ಬಾರಿಯೂ ಎಲ್ಲಾ ತಂಡಗಳು ಸಮಾನ ಸಾಮರ್ಥ್ಯದೊಂದಿಗೆ ಸ್ಪರ್ಧಿಸಲಿವೆ. ಆಟದ ವೇಳೆ ಯಾವುದೇ ಗಲಾಟೆಗಳಿಗೆ ಅವಕಾಶ ನೀಡದೆ ಶಿಸ್ತು ಕಾಪಾಡಬೇಕು ಎಂದು ಹೇಳಿದರು.
ರಾಣಾ ಸ್ಪೋರ್ಟ್ಸ್ ಕ್ಲಬ್ ಗೌರವ ಕಾರ್ಯದರ್ಶಿ ಎ.ಬಿ.ಸುದರ್ಶನ್ ಮಾತನಾಡಿ, ರಾಣಾ ಸ್ಪೋರ್ಟ್ಸ್ ಕ್ಲಬ್ 1947ರಲ್ಲಿ ಸ್ಥಾಪನೆಯಾಗಿದ್ದು, 76 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ಕ್ಲಬ್ನ ಸಂಸ್ಥಾಪಕರು ಹಾಕಿಕೊಟ್ಟ ಭದ್ರ ಬುನಾದಿಯನ್ನು ಮುಂದುವರಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ. ತಮ್ಮ ತಾಯಿ ಗೌರಮ್ಮ ಬಸವೇಗೌಡರ ಸ್ಮರಣಾರ್ಥ ಪ್ರೀಮಿಯರ್ ಲೀಗ್ ಆಯೋಜಿಸುತ್ತಿರುವುದು ಸಂತಸ ತಂದಿದೆ ಎಂದರು.
ಟೂರ್ನಮೆಂಟ್ ಆಯೋಜನೆಯಲ್ಲಿ ಹರೀಶ್ ಹಾಗೂ ಅವರ ತಂಡದ ಪರಿಶ್ರಮವನ್ನು ಶ್ಲಾಘಿಸಿದ ಅವರು, ಆಟಗಾರರು ಏಕರೂಪದ ಸಮವಸ್ತ್ರ ಧರಿಸಿ ಶಿಸ್ತಿನಿಂದ ಭಾಗವಹಿಸಿರುವುದು ಮತ್ತು ಮೈದಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಮೈದಾನದ ಹೊರಭಾಗದಲ್ಲಿ ಕಸದ ರಾಶಿ ಇರುವುದರಿಂದ ನಗರಸಭೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಚಿಕ್ಕಮಗಳೂರಿನಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಬೇಕೆಂಬುದು ಹಲವು ವರ್ಷಗಳ ಕನಸಾಗಿದೆ. ಶಾಸಕ ತಮ್ಮಯ್ಯ ಅವರು ಎಂಟು ಎಕರೆ ಜಾಗ ಮೀಸಲಿಡುವ ಭರವಸೆ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಅದು ಕಾರ್ಯರೂಪಕ್ಕೆ ಬರಲಿ ಎಂದು ಆಶಿಸಿದರು. ಗೆಲುವು ಮತ್ತು ಸೋಲು ಜೀವನದ ಭಾಗವಾಗಿದ್ದು, ಸೋಲನ್ನೂ ಕ್ರೀಡಾಪಟುಗಳು ಸಮಾನ ಮನೋಭಾವದಿಂದ ಸ್ವೀಕರಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ನಾಣ್ಯದ ಎರಡು ಮುಖಗಳಿದ್ದಂತೆ. ಇಂದು ಗೆದ್ದವರು ಮುಂದಿನ ಪಂದ್ಯದಲ್ಲಿ ಸೋಲಬಹುದು, ಇಂದು ಸೋತವರು ಮುಂದೆ ಗೆಲ್ಲಬಹುದು. ಆದ್ದರಿಂದ ಎಲ್ಲರೂ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಬೇಕು. ಚಿಕ್ಕಮಗಳೂರು ಪ್ರೀಮಿಯರ್ ಲೀಗ್ ಮೂಲಕ ಜಿಲ್ಲೆಯ ಯುವ ಪ್ರತಿಭೆಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.
ರಾಣಾ ಸ್ಪೋರ್ಟ್ಸ್ ಕ್ಲಬ್ ಖಜಾಂಚಿ ಗೋಪಾಲಕೃಷ್ಣ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಆರಂಭಗೊಂಡಿರುವ ರಾಣಾ ಸ್ಪೋರ್ಟ್ಸ್ ಕ್ಲಬ್ ಚಿಕ್ಕಮಗಳೂರಿನ ಕ್ರೀಡಾ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿದೆ. ಕ್ಲಬ್ನ ಬೆಳವಣಿಗೆಗೆ ಹಿರಿಯರು ಸಾಕಷ್ಟು ಶ್ರಮಿಸಿದ್ದಾರೆ. ಪ್ರಸ್ತುತ ಹರೀಶ್ ಮತ್ತು ಅವರ ತಂಡ ಒಂಬತ್ತನೇ ಆವೃತ್ತಿಯ ಟೂರ್ನಮೆಂಟ್ನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವುದು ಅಭಿನಂದನೀಯ ಎಂದರು.
ಟೂರ್ನಮೆಂಟ್ಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಂದ್ಯಗಳನ್ನು ವೀಕ್ಷಿಸುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಸಮಿತಿ ರಚಿಸಿ ದಾನಿಗಳು ಹಾಗೂ ಕ್ರೀಡಾಭಿಮಾನಿಗಳ ಸಹಕಾರದಿಂದ ಶಾಶ್ವತ ನಿಧಿ ಸಂಗ್ರಹಿಸುವ ಮೂಲಕ ಪಂದ್ಯಾವಳಿಯನ್ನು ಮತ್ತಷ್ಟು ವ್ಯವಸ್ಥಿತವಾಗಿ ನಡೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಣಾ ಸ್ಪೋರ್ಟ್ಸ್ ಕ್ಲಬ್ನ ಪದಾಧಿಕಾರಿಗಳು, ಕ್ರೀಡಾಭಿಮಾನಿಗಳು, ವಿವಿಧ ತಂಡಗಳ ಮಾಲೀಕರು, ಆಟಗಾರರು, ಗಣ್ಯರು ಹಾಗೂ ಪತ್ರಿಕಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
MLA Thammayya inaugurates Chikkamagaluru Premier League
Leave a comment