ಚಿಕ್ಕಮಗಳೂರು: ಬಸ್ ಹತ್ತುವ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲನ್ನೇ ದುರುಪಯೋಗಪಡಿಸಿಕೊಂಡ ಕಳ್ಳರು ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಿರುವ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕಡೂರು ತಾಲೂಕಿನ ಹುಯಿಗೆರೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪ್ರಗತಿ ಅವರು ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು. ನ.6ರಂದು ಚಿಕ್ಕಮಗಳೂರು ನಗರದ ಸಿಡಿಪಿಒ ಕಚೇರಿಯಲ್ಲಿ ಸಭೆ ಇದ್ದ ಹಿನ್ನೆಲೆಯಲ್ಲಿ ತಮ್ಮ ಸ್ನೇಹಿತೆ ಅನಿತಾ ಅವರೊಂದಿಗೆ ನಗರಕ್ಕೆ ಬಂದಿದ್ದರು.
ಸಭೆ ಮುಗಿಸಿಕೊಂಡು ಸಂಜೆ ಸುಮಾರು 5 ಗಂಟೆಗೆ ಊರಿಗೆ ಮರಳಲು ಇಬ್ಬರೂ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಶೃಂಗೇರಿ ಮಾರ್ಗವಾಗಿ ತೆರಳುವ ಕೆಎ-18 ಎಸ್-720 ಸಂಖ್ಯೆಯ ಸಾರಿಗೆ ಬಸ್ ಬಂದಿದ್ದು, ಬಸ್ ಹತ್ತಲು ಪ್ರಯಾಣಿಕರು ಮುಗಿಬಿದ್ದಿದ್ದರು. ಸುಮಾರು 10ರಿಂದ 15 ಮಂದಿ ಏಕಕಾಲದಲ್ಲಿ ಬಸ್ ಹತ್ತಲು ಮುಂದಾದ ಪರಿಣಾಮ ನೂಕುನುಗ್ಗಲು ಉಂಟಾಗಿತ್ತು.
ಈ ಗೊಂದಲದ ನಡುವೆಯೇ ಕಳ್ಳರು ಪ್ರಗತಿ ಅವರ ಗಮನಕ್ಕೆ ಬಾರದಂತೆ ಕುತ್ತಿಗೆಯಲ್ಲಿದ್ದ ಒಂದು ಎಳೆಯ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಗತಿ ಅವರು ರಾಂಪುರದ ಬಳಿ ಕುತ್ತಿಗೆಯನ್ನು ನೋಡಿಕೊಂಡಾಗ ಮಾಂಗಲ್ಯ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬಸ್‌ನಲ್ಲಿ ಹುಡುಕಾಡಿದರೂ ಸರ ಪತ್ತೆಯಾಗಿಲ್ಲ. ಬಳಿಕ ಆಲ್ದೂರಿನಲ್ಲಿ ಬಸ್ ನಿಲ್ಲಿಸಿ ಪರಿಶೀಲಿಸಿದರೂ ಪ್ರಯೋಜನವಾಗಿಲ್ಲ. ನಂತರ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ವಾಪಸ್ ಬಂದು ಹುಡುಕಾಡಿದರೂ ಸರ ಸಿಕ್ಕಿಲ್ಲ.
ಕಳುವಾಗಿರುವ ಮಾಂಗಲ್ಯ ಸರ ಸುಮಾರು 30 ಗ್ರಾಂ ತೂಕ ಹೊಂದಿದ್ದು, ಅದರ ಅಂದಾಜು ಮೌಲ್ಯ 5 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ನ.7ರಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Mangalsutra necklace worth Rs 5 lakh stolen from a woman boarding a bus
Leave a comment