ಚಿಕ್ಕಮಗಳೂರು : ರೈತರಿಗೆ ಜಾತಿ, ಧರ್ಮ, ಪಕ್ಷದ ಬೇಧವಿಲ್ಲ. ರೈತ ಎಂದರೆ ರೈತ ಮಾತ್ರ. ರೈತ ಸುಖವಾಗಿದ್ದರೆ ದೇಶ ಅಭಿವೃದ್ಧಿಯಾಗುತ್ತದೆ. ರೈತರ ಪರಿಶ್ರಮದಿಂದಲೇ ನಮ್ಮೆಲ್ಲರ ಬದುಕು ಸಾಗುತ್ತಿದೆ. ಆದ್ದರಿಂದ ರೈತರ ಬದುಕು ಹಸನಾಗಬೇಕು ಎಂಬುದು ಎಲ್ಲರ ಆಶಯವಾಗಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ದೇವನೂರು ಕೆರೆ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಿಂದ ಕೆರೆಗಳಿಗೆ ನೀರು ಹರಿದು ಸತತ ಮೂರನೇ ವರ್ಷ ದೇವನೂರು ಕೆರೆ ಭರ್ತಿಯಾಗಿರುವುದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ. ಕೆರೆಗಳಿಗೆ ನೀರು ಬಂದಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ರೈತರ ಬದುಕು ಹಸನಾಗಬೇಕಾದರೆ ಉತ್ತಮ ಮಳೆಯೊಂದಿಗೆ ಉತ್ತಮ ಬೆಳೆ ಮತ್ತು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯಬೇಕು ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಗೆ ೨೦೧೩ ರಿಂದ ೨೦೧೮ ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಾಗಿರುವ ಸಂದರ್ಭದಲ್ಲಿ ಯೋಜನೆ ಉದ್ಘಾಟನೆಗೊಂಡು ನೀರು ಹರಿಯುತ್ತಿದೆ. ಇದರ ಫಲವಾಗಿ ಕಳೆದ ಮೂರು ವರ್ಷಗಳಿಂದ ದೇವನೂರು, ಬೆಳವಾಡಿ, ಮಾಚೇನಹಳ್ಳಿ ಹಾಗೂ ಕುರುಬರಹಳ್ಳಿ ಕೆರೆಗಳು ಸತತವಾಗಿ ತುಂಬುತ್ತಿವೆ. ಈ ಕೆರೆಗಳು ಸತತ ಮೂರು ವರ್ಷ ತುಂಬಿರುವುದು ಈ ಭಾಗದ ರೈತರಿಗೆ ಮಹತ್ವದ ಸಂಗತಿಯಾಗಿದೆ ಎಂದು ತಿಳಿಸಿದರು.
ಎತ್ತಿನಹೊಳೆ ನೀರು ಕೆರೆಗಳಿಗೆ ಹರಿದು ಬರುತ್ತಿರುವುದರಿಂದ ರೈತರು, ತಮ್ಮ ಜಮೀನುಗಳ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಹೆಚ್ಚಳದ ಪ್ರಯೋಜನ ಪಡೆಯುತ್ತಿದ್ದಾರೆ. ನಿಡಗಟ್ಟ, ಎಸ್.ಬಿದರೆ, ನಾಗರಾಳು, ಗುಣಸಾಗರ, ಕಬಳಿ, ಸಿಂದಗೆರೆ ಸೇರಿದಂತೆ ಹಲವು ಗ್ರಾಮಗಳ ರೈತರು ಸ್ವಂತ ಹಣ ಹಾಗೂ ಶ್ರಮದಿಂದ ನೀರನ್ನು ವಿವಿಧ ಕೆರೆಗಳಿಗೆ ಹರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸರ್ಕಾರದ ಅನುದಾನವಿಲ್ಲದೆ ರೈತರೇ ಒಗ್ಗಟ್ಟಿನಿಂದ ನೀರು ಹರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಬಾರಿ ಭೀಕರ ಬರಗಾಲ ಎದುರಾದರೂ ಕೆರೆಗಳಲ್ಲಿ ನೀರು ಸಂಗ್ರಹವಾಗಿರುವುದರಿಂದ ಅಂತರ್ಜಲ ಮರುಪೂರಣಗೊಂಡಿದೆ. ದೇವನೂರು ಮತ್ತು ಬೆಳವಾಡಿ ಕೆರೆಗಳು ತುಂಬಿರುವ ಪರಿಣಾಮ ಈ ಭಾಗದಲ್ಲಿ ದಾಳಿಂಬೆ ಬೆಳೆದ ರೈತರಿಗೆ ಅನುಕೂಲವಾಗಿದೆ. ಉತ್ತಮ ಫಸಲು ದೊರೆತಿದ್ದು, ಮಾರುಕಟ್ಟೆಯಲ್ಲಿಯೂ ಉತ್ತಮ ಬೆಲೆ ಸಿಕ್ಕಿರುವುದರಿಂದ ರೈತರು ಸಂತಸದಲ್ಲಿದ್ದಾರೆ. ಕೆರೆ ನೀರು ಕೃಷಿಗೆ ಮಾತ್ರವಲ್ಲದೆ ಕುಡಿಯುವ ನೀರಿನ ಮೂಲಗಳಿಗೂ ಆಸರೆಯಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಜನರ ಬದುಕಿಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಆದ್ಯತೆ ನೀಡುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದ ಐದು ತಿಂಗಳೊಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಭಿವೃದ್ಧಿ ವಿಚಾರದಲ್ಲಿಯೂ ಸರ್ಕಾರ ಹಿಂದೆ ಬಿದ್ದಿಲ್ಲ. ಸಕರಾಯಪಟ್ಟಣದಿಂದ ಬಾಣಾವರ ರಸ್ತೆ ಅಭಿವೃದ್ಧಿ, ದೇವನೂರಿನಿಂದ ಚಿಕ್ಕದೇವನೂರು ಕೆರೆ ಏರಿ ಅಗಲೀಕರಣ ಸೇರಿದಂತೆ ಹಲವು ಕಾಮಗಾರಿಗಳು ಅಭಿವೃದ್ಧಿಗೆ ಸಾಕ್ಷಿಯಾಗಿವೆ ಎಂದರು.
ಕ್ಷೇತ್ರದ ೩೪ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿಯೂ ವಿವಿಧ ಸಮಾಜಗಳ ದೇವಸ್ಥಾನಗಳು, ಸಮುದಾಯ ಭವನಗಳು ಹಾಗೂ ಅಲ್ಪಸಂಖ್ಯಾತರ ದರ್ಗಾ, ಮಸೀದಿಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿದೆ. ಎಲ್ಲ ಸಮಾಜಗಳ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ದೇವನೂರು ಸೇರಿದಂತೆ ಈ ಭಾಗದ ಕೆರೆಗಳಿಗೆ ಪ್ರತಿವರ್ಷ ನಿರಂತರವಾಗಿ ನೀರು ಹರಿಯುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ಎತ್ತಿನಹೊಳೆ ಯೋಜನೆಯಿಂದ ಈ ಭಾಗದ ಕೆರೆಗಳಿಗೆ ನೀರು ಹರಿದು ಬರುತ್ತಿರುವುದರಿಂದ ರೈತಾಪಿ ವರ್ಗದಲ್ಲಿ ಹೊಸ ಭರವಸೆ ಮೂಡಿದೆ. ಹಲವು ವರ್ಷಗಳಿಂದ ನೀರಿಲ್ಲದೆ ಒಣಗಿದ್ದ ಕೆರೆಗಳಲ್ಲಿ ಇದೀಗ ಸತತ ಮೂರು ವರ್ಷಗಳಿಂದ ನೀರು ಸಂಗ್ರಹವಾಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
೨೦೧೩-೧೪ ಮತ್ತು ೨೦೧೪-೧೫ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿದ್ದರು. ಪ್ರಸ್ತುತ ನಮ್ಮ ಸರ್ಕಾರದ ಅವಧಿಯಲ್ಲಿ ಯೋಜನೆ ಉದ್ಘಾಟನೆಗೊಂಡು ನೀರು ಹರಿಯುತ್ತಿದೆ. ಹಳೇಬೀಡು ಕೆರೆ ಸೇರಿದಂತೆ ದೇವನೂರು, ಬೆಳವಾಡಿ ಹಾಗೂ ಸುತ್ತಮುತ್ತಲಿನ ಹಲವು ಕೆರೆಗಳಿಗೆ ನೀರು ತಲುಪಿದೆ ಎಂದರು.
ಈ ಭಾಗದಲ್ಲಿ ಬರಗಾಲದ ಪರಿಸ್ಥಿತಿ ಎದುರಾದಾಗ ಸರ್ಕಾರ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಂಡಿದೆ. ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕಿಗೆ ನೆರವಾಗುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
ಒಂದು ಕಾಲದಲ್ಲಿ ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಗೆ ತೆರಳುತ್ತಿದ್ದ ಈ ಭಾಗದ ಅನೇಕರು ಇದೀಗ ತಮ್ಮ ಊರಿನಲ್ಲಿಯೇ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವಂತಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಮುಂದುವರಿಸಿ ಊರಿನಲ್ಲಿಯೇ ನೆಲೆಸಲು ಕೆರೆಗಳಿಗೆ ನೀರು ಬಂದಿರುವುದು ಪ್ರಮುಖ ಕಾರಣವಾಗಿದೆ. ದೇವನೂರು ಮತ್ತು ಚಿಕ್ಕದೇವನೂರು ಭಾಗದ ಜನರಲ್ಲಿ ಇದರಿಂದ ಸಂತಸ ಮೂಡಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್, ಕಿರಣ್, ಲೋಹಿತ್, ಅರುಣ್, ರೈತಪರ ಹೋರಾಟಗಾರರಾದ ಹೆಚ್.ಎಂ.ರೇಣುಕಾರಾಧ್ಯ, ನಟರಾಜ್ ಎಸ್. ಕೊಪ್ಪಲು, ರವೀಶ್ ಬಸಪ್ಪ, ಗುರುಶಾಂತಪ್ಪ, ಬೆಳವಾಡಿ ಅಮೀರ್, ನಿಡಗಟ್ಟ ಕುಮಾರ್ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Our lives are sustained by the hard work of farmers.
Leave a comment