ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್ ಸಮೀಪದ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯೂಡಿ) ಹಳೆಯ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದ್ದ ₹4.94 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳು ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕೋವಿಡ್-19 ಮೊದಲ ಅಲೆಯ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಔಷಧ ಮತ್ತು ವೈದ್ಯಕೀಯ ಪರಿಕರಗಳನ್ನು ಈ ಕಟ್ಟಡದಲ್ಲಿ ಸಂಗ್ರಹಿಸಿ, ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ವಿತರಿಸಲಾಗುತ್ತಿತ್ತು. ಕಟ್ಟಡದಲ್ಲಿದ್ದ ಉಪಕರಣಗಳನ್ನು ಪರಿಶೀಲಿಸಿದಾಗ ಕೆಲವು ವೈದ್ಯಕೀಯ ಉಪಕರಣಗಳು ಕಾಣೆಯಾಗಿರುವುದು ಪತ್ತೆಯಾಗಿದೆ.
ಕಳವಾದ ವಸ್ತುಗಳಲ್ಲಿ ಏಳು ಮಲ್ಟಿ-ಪ್ಯಾರಾ ಮಾನಿಟರ್‌ಗಳು, ಎರಡು ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳು, 20 ಆಕ್ಸಿಜನ್ ಫ್ಲೋಮೀಟರ್‌ಗಳು ಹಾಗೂ 16 ಸಿರಿಂಜ್ ಪಂಪ್‌ಗಳು ಸೇರಿವೆ. ಇವುಗಳ ಅಂದಾಜು ಮಾರುಕಟ್ಟೆ ಮೌಲ್ಯ ₹4,94,000 ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಟ್ಟಡದ ನವೀಕರಣದ ಸಂದರ್ಭದಲ್ಲಿ ಅಥವಾ ಕಟ್ಟಡದ ಮುಂಭಾಗದಲ್ಲಿ ಖಾಸಗಿ ಆಂಬುಲೆನ್ಸ್‌ಗಳನ್ನು ನಿಲ್ಲಿಸುವ ಸಮಯದಲ್ಲಿ ಕಳವು ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಲೋಹಿತ್ ಎಚ್.ಎಂ. ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Theft of medical equipment worth ₹4.94 lakh
Leave a comment