ಚಿಕ್ಕಮಗಳೂರು: ನಗರ ಸ್ಥಳೀಯ ಸಂಸ್ಥೆಗಳಿಗೆ ಘನತ್ಯಾಜ್ಯ ನಿರ್ವಹಣೆ ಎನ್ನುವುದು ಅತ್ಯಂತ ತುರ್ತು ಹಾಗೂ ಪ್ರಮುಖ ಆದ್ಯತೆಯ ವಿಷಯವಾಗಿದ್ದು, ಸಾರ್ವಜನಿಕ ಸೇವೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತಿಯೊಂದು ಸಂಸ್ಥೆಯೂ ಕಟ್ಟುನಿಟ್ಟಿನ ಉಪನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಸೂಚಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಚಿಕ್ಕಮಗಳೂರು ನಗರಸಭೆಯ ಜಂಟಿ ಆಶ್ರಯದಲ್ಲಿ ನಗರದ ಕುವೆಂಪು ಕಲಾ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಬೆಂಗಳೂರು ಮತ್ತು ಮೈಸೂರು ವಿಭಾಗಗಳ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ’ಘನತ್ಯಾಜ್ಯ ನಿರ್ವಹಣಾ ಕರಡು ಉಪನಿಯಮಗಳ’ ರಾಜ್ಯ ಮಟ್ಟದ ವಿಭಾಗವಾರು ಪಾಲುದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಘನತ್ಯಾಜ್ಯ ವಿಲೇವಾರಿ ಹಾಗೂ ಅದರ ಪ್ರಾಮುಖ್ಯತೆಯ ಕುರಿತು ಹೊಸದಾಗಿ ಹೇಳಬೇಕಾಗಿಲ್ಲ. ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ಪ್ರತ್ಯೇಕಿಸಿ ಸಂಗ್ರಹಿಸುವುದು ಮತ್ತು ವಿಲೇವಾರಿ ಮಾಡುವುದು ಅತ್ಯಗತ್ಯ. ಇದನ್ನು ಸರಿಯಾಗಿ ಪಾಲಿಸದಿದ್ದರೆ ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಹಾಗೂ ವ್ಯವಸ್ಥೆಯ ನಿರ್ವಹಣೆಗೆ ಭಾರಿ ವೆಚ್ಚ ಭರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಶಕಗಳಿಂದ ಶೇಖರಣೆಯಾಗಿರುವ ಹಳೆಯ ಕಸದ ವಿಲೇವಾರಿಯು ದೊಡ್ಡ ಸವಾಲಾಗಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದಿದ್ದರೆ ಅಂತರ್ಜಲ ಕಲುಷಿತಗೊಳ್ಳುವ ಆತಂಕವಿದೆ. ಸ್ವಚ್ಛ ಭಾರತ್ ಅಭಿಯಾನದಡಿ ಈಗಾಗಲೇ ಸ್ಪಷ್ಟ ಮಾರ್ಗದರ್ಶಿ ಸೂಚಿಗಳನ್ನು ನೀಡಲಾಗಿದ್ದು, ಪ್ರಸ್ತುತ ಸರ್ಕಾರದ ನಗರಾಭಿವೃದ್ಧಿ ನಿರ್ದೇಶನಾಲಯವು ಮಾದರಿ ಉಪನಿಯಮಗಳನ್ನು ರೂಪಿಸಿದೆ. ಇದನ್ನು ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ಅನುಮೋದಿಸಿ ಜಾರಿಗೆ ತರಬೇಕು ಎಂದರು.
ನಗರ ಪ್ರದೇಶಗಳಲ್ಲಿ ಎಸ್ಟಿಪಿ (ತ್ಯಾಜ್ಯನೀರು ಸಂಸ್ಕರಣಾ ಘಟಕ) ಹಾಗೂ ಎಂಆರ್ಎಫ್ (ಮರುಬಳಕೆ ಸಾಮಗ್ರಿ ಸಂಗ್ರಹಣಾ ಘಟಕ) ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದರೆ, ಅವುಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಮೂಲಸೌಕರ್ಯಗಳ ಕೊರತೆಯನ್ನು ನೀಗಿಸಿ, ಕಸ ಉಸ್ತುವಾರಿ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರಸಭೆ ಆಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಅಗತ್ಯತೆ ಹಾಗೂ ವಾಸ್ತವಿಕ ಸವಾಲುಗಳಿಗೆ ಪೂರಕವಾಗಿ ಉಪನಿಯಮಗಳನ್ನು ರೂಪಿಸುವುದು ಅಗತ್ಯ ಎಂದು ಹೇಳಿದರು. ೨೦೧೬ರ ಘನತ್ಯಾಜ್ಯ ನಿರ್ವಹಣಾ ನಿಯಮಾವಳಿ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನಗಳ ಅನ್ವಯ ಇದುವರೆಗೆ ಕಾರ್ಯನಿರ್ವಹಿಸಲಾಗಿದೆ. ಆದರೆ ರಾಜ್ಯದಾದ್ಯಂತ ಏಕರೂಪದ ಬೈಲಾ ಜಾರಿಗೆ ತರುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿಕ್ರಿಯೆ ಮತ್ತು ಸಲಹೆಗಳು ಅತ್ಯಗತ್ಯ. ಸ್ಥಳೀಯ ಆರೋಗ್ಯ ಪರಿವೀಕ್ಷಕರಿಂದ ಹಿಡಿದು ಪೌರಾಯುಕ್ತರವರೆಗೆ ಎಲ್ಲ ಹಂತದ ಅಧಿಕಾರಿಗಳ ಅನುಭವವನ್ನು ಆಧರಿಸಿ, ’ಶೂನ್ಯ ತ್ಯಾಜ್ಯ ನಿರ್ವಹಣೆ’ ತಲುಪುವ ಗುರಿ ಹೊಂದಲಾಗಿದೆ ಎಂದರು.
ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಶೇ ೧೦೦ರಷ್ಟು ಯಶಸ್ವಿಯಾಗಿದೆ. ತ್ಯಾಜ್ಯ ಮರುಬಳಕೆ ಘಟಕದಲ್ಲಿ ತ್ಯಾಜ್ಯ ವಿಂಗಡಿಸಿ, ಮರುಬಳಕೆಯಾಗುವ ವಸ್ತುಗಳನ್ನು ಸಂಬಂಧಪಟ್ಟ ಕಾರ್ಖಾನೆಗಳಿಗೆ ಕಳುಹಿಸಿಕೊಡುವ ವೈಜ್ಞಾನಿಕ ವ್ಯವಸ್ಥೆ ಜಾರಿಯಲ್ಲಿದೆ. ಇತರೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಚಿಕ್ಕಮಗಳೂರಿನ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು ಎಂದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಭವ್ಯಾ ಮಂಜುನಾಥ್, ಉಪಾಧ್ಯಕ್ಷೆ ಲಲಿತಾ , ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲ್ ಜಾದವ್, ಪೌರಾಡಳಿತ ನಿರ್ದೇಶನಾಲಯದ ಇ.ಇ. ಮನುಕುಮಾರ್ ಸೇರಿದಂತೆ ಬೆಂಗಳೂರು ಹಾಗೂ ಮೈಸೂರು ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಭಾಗಿದಾರರು ಉಪಸ್ಥಿತರಿದ್ದರು.
Strict rules must be implemented for solid waste management.
Leave a comment