ಚಿಕ್ಕಮಗಳೂರು: ರಾಜ್ಯ ಸರ್ಕಾರದ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ರೈತರು, ಬಡವರು, ವೃದ್ಧರು, ವಿಧವೆಯರು ಮತ್ತು ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಜನರ ಪರವಾಗಿ ಧ್ವನಿ ಎತ್ತಲು ಹಾಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ. ಕಳೆದ ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ ತಮ್ಮ ಹೋರಾಟ ಸೋತಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ದೊರಕುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಅಂಗವಿಕಲರು, ವಿಧವೆಯರು ಹಾಗೂ ವೃದ್ಧರಿಗೆ ನೀಡಲಾಗುತ್ತಿದ್ದ ಪಿಂಚಣಿ ಯೋಜನೆಗಳನ್ನು ಆದಾಯದ ಮಿತಿಯ ನೆಪದಲ್ಲಿ ಸ್ಥಗಿತಗೊಳಿಸಿರುವುದು ಅನ್ಯಾಯ. ಕೆಲವರಿಗೆ ಆರೇಳು ತಿಂಗಳು, ಮತ್ತೆ ಕೆಲವರಿಗೆ ಒಂದು ವರ್ಷದಿಂದ ಪಿಂಚಣಿ ಹಣ ಬಂದಿಲ್ಲ ಎಂಬ ದೂರುಗಳಿವೆ. ಸರ್ಕಾರ ತಕ್ಷಣ ಪಿಂಚಣಿ ಸ್ಥಗಿತಗೊಳಿಸಿರುವವರ ಖಾತೆಗೆ ಹಳೆಯ ಬಾಕಿಯನ್ನೂ ಒಳಗೊಂಡು ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.
ಶ್ರಾವಣ ಮಾಸದಲ್ಲಿಯೇ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನಕ್ಕೆ ಕೆಲವೇ ಗಂಟೆ ವಿದ್ಯುತ್ ನೀಡಲಾಗುತ್ತಿದ್ದು, ಇದರಿಂದ ತೋಟಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಸಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಿಸಿರುವ ವಿದ್ಯುತ್ ಉಪಕೇಂದ್ರಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಅವುಗಳಿಗೆ ಚಾಲನೆ ನೀಡಲು ಸರ್ಕಾರ ಮುಂದಾಗಿಲ್ಲ ಆರೋಪಿಸಿದರು.
ಚಿಕ್ಕಮಗಳೂರು ತಾಲೂಕು ಸೇರಿದಂತೆ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರವಾಗಿ ಹಾನಿಗೊಳಗಾಗಿರುವ ಪ್ರದೇಶಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು. ಕಡಿಮೆ ಮಳೆಯಿಂದಾಗಿ ಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ. ಬಿತ್ತನೆಗೆ ಖರ್ಚು ಮಾಡಿದ ಹಣವೂ ರೈತರಿಗೆ ಮರಳದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರಾಜಕೀಯ ತಾರತಮ್ಯ ಮಾಡದೆ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಗುಟ್ಕಾ ನಿಷೇಧದ ಕುರಿತು ಸಚಿವರ ಹೇಳಿಕೆಯ ಪರಿಣಾಮ ಅಡಿಕೆ ಬೆಲೆ ಕುಸಿದಿದ್ದು, ಇದರಿಂದ ಅಡಿಕೆ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಆರೋಗ್ಯಕ್ಕೆ ಹಾನಿಕರವೆಂದು ಹೇಳುವ ಇತರ ಉತ್ಪನ್ನಗಳ ಬಗ್ಗೆಯೂ ಸರ್ಕಾರ ಇದೇ ರೀತಿಯ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ಬಿಪಿಎಲ್ ಕಾರ್ಡ್ಗಳ ರದ್ದುಪಡಿಸುವಿಕೆ, ಹೊಸ ಕಾರ್ಡ್ ವಿತರಣೆಯಲ್ಲಿ ವಿಳಂಬ, ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಗತ್ಯ ವಸ್ತುಗಳು ಹಾಗೂ ವಿವಿಧ ಸೇವೆಗಳ ದರ ಹೆಚ್ಚಾಗಿದೆ ಎಂದು ದೂರಿದರು.
ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಲವು ಕಾಮಗಾರಿಗಳನ್ನು ಮಂಜೂರು ಮಾಡಿಸಿz್ದೆÃನೆ. ಭದ್ರಾ ನದಿಯಿಂದ ನೀರು ತರುವ ಯೋಜನೆ, ರಸ್ತೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ದೊರೆತಿದೆ. ನೀರಾವರಿ ಯೋಜನೆಗಳ ಹೆಸರಿನಲ್ಲಿ ರಾಜಕೀಯ ಮಾಡದೆ, ಈಗ ಒಣಗುತ್ತಿರುವ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು. ರೈತರ ಸಂಕಷ್ಟದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಜನರೊಂದಿಗೆ ನಿಲ್ಲಬೇಕು ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ಮಳೆ ಕೊರತೆಯಿಂದ ಲಕ್ಕವಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಿತ್ತನೆ ಮಾಡಿರುವ ಜೋಳ, ರಾಗಿ ಹಾಗೂ ಇತರ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆ ಎದುರಾಗಿದೆ. ಕೂಡಲೇ ಚಿಕ್ಕಮಗಳೂರು ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಬರ ಘೋಷಣೆಯಾದರೆ ಸರ್ಕಾರದ ವತಿಯಿಂದ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಿ ಜಾನುವಾರುಗಳಿಗೆ ಮೇವು ಒದಗಿಸಲು ಸಾಧ್ಯವಾಗುತ್ತದೆ. ಇನ್ನೊಂದು ತಿಂಗಳಲ್ಲಿ ರೈತರ ಬಳಿ ಇರುವ ಮೇವು ಸಹ ಮುಗಿಯುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ರೈತರನ್ನು ಸಂಘಟಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಕೋಟೆ ರಂಗನಾಥ್, ದೇವರಾಜ್, ರವೀಂದ್ರ ಬೆಳವಾಡಿ, ಈಶ್ವರಹಳ್ಳಿ ಮಹೇಶ್ ಮತ್ತಿತರರಿದ್ದರು.
BJP protests against anti-people policies in Kalasapura village.
Leave a comment