ಚಿಕ್ಕಮಗಳೂರು: ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವುದಾಗಿ ನಂಬಿಸಿ ಬ್ಯಾಂಕ್ ಅಧಿಕಾರಿಯಂತೆ ನಟಿಸಿದ ಸೈಬರ್ ವಂಚಕರು ವ್ಯಕ್ತಿಯೊಬ್ಬರ ಕ್ರೆಡಿಟ್ ಕಾರ್ಡ್ನಿಂದ ₹1.59 ಲಕ್ಷ ಹಣವನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ನಗರದ ನಿವಾಸಿ ಕುಶ ಡಿ.ಆರ್. ಅವರಿಗೆ ಜುಲೈ 13ರಂದು ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಆತ ತನ್ನನ್ನು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಅವರ ಕ್ರೆಡಿಟ್ ಕಾರ್ಡ್ನ ಮಿತಿಯನ್ನು ₹1.60 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸುವುದಾಗಿ ಹೇಳಿ ನಂಬಿಸಿದ್ದಾನೆ.
ನಂತರ ವಾಟ್ಸಾಪ್ ಮೂಲಕ ಎಪಿಕೆ (APK) ಆ್ಯಪ್ನ ಲಿಂಕ್ ಕಳುಹಿಸಿದ್ದು, ಅದನ್ನು ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವಂತೆ ಸೂಚಿಸಿದ್ದಾನೆ. ಆ್ಯಪ್ ಇನ್ಸ್ಟಾಲ್ ಮಾಡಿದ ಬಳಿಕ ಮೊಬೈಲ್ಗೆ ಬಂದ ಮೂರು ಒಟಿಪಿ (OTP) ಸಂಖ್ಯೆಗಳನ್ನೂ ವಂಚಕನಿಗೆ ತಿಳಿಸಲು ಹೇಳಿದ್ದು, ದೂರುದಾರರು ಅದನ್ನು ಹಂಚಿಕೊಂಡಿದ್ದಾರೆ.
ಸ್ವಲ್ಪ ಸಮಯದ ಬಳಿಕ ಕ್ರೆಡಿಟ್ ಕಾರ್ಡ್ನಿಂದ ₹1,59,920 ಹಣ ಡ್ರಾ ಆಗಿರುವ ಕುರಿತು ಮೊಬೈಲ್ಗೆ ಸಂದೇಶ ಬಂದಿದೆ. ತಕ್ಷಣವೇ ಅವರು ಆಕ್ಸಿಸ್ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿದ್ದಾರೆ. ಅಲ್ಲದೆ ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದು, ದೂರು ಸಂಖ್ಯೆ 31607260121743 ಆಗಿದೆ.
ಮರುದಿನ ಬ್ಯಾಂಕ್ಗೆ ಭೇಟಿ ನೀಡಿ ವಿಚಾರಿಸಿದಾಗ, ವಹಿವಾಟಿನ ವಿವರಗಳನ್ನು 90 ದಿನಗಳೊಳಗೆ ನೀಡುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿಗಳ ವಿರುದ್ಧ ಬಿಎನ್ಎಸ್ ಕಲಂ 66(2), 318(4) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸೈಬರ್ ಸುರಕ್ಷತಾ ಸಲಹೆ: ಬ್ಯಾಂಕ್ ಅಧಿಕಾರಿಗಳು ಎಂದಿಗೂ ಫೋನ್ ಮೂಲಕ OTP, PIN ಅಥವಾ APK ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಲು ಕೇಳುವುದಿಲ್ಲ. ಇಂತಹ ಕರೆಗಳು ಬಂದರೆ ಯಾವುದೇ ಮಾಹಿತಿ ಹಂಚಿಕೊಳ್ಳದೇ, ತಕ್ಷಣವೇ 1930 ಸಹಾಯವಾಣಿ ಅಥವಾ ಸಮೀಪದ ಸೈಬರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
₹1.59 lakh fraud on the pretext of increasing credit card limit
Leave a comment