ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್ ಉಂಟಾಯಿತು. ಮಳೆ ಮಧ್ಯೆ ಸಿಲುಕಿದ ಪ್ರವಾಸಿಗರು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು.
ಬಂಡೆ ರಸ್ತೆ ಮೇಲೆ ಉರುಳಿಬೀಳುವ ಕೆಲವೇ ಕ್ಷಣಗಳ ಮೊದಲು ಪ್ರವಾಸಿ ಕಾರೊಂದು ಆ ಸ್ಥಳವನ್ನು ದಾಟಿದ್ದು, ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಚಾರ್ಮಾಡಿ ಘಾಟಿಯ ವಿವಿಧೆಡೆ ಮಳೆಯ ಪರಿಣಾಮ ಧರೆ ಕುಸಿತ, ಬಂಡೆಗಳು ಜಾರುವುದು ಹಾಗೂ ಮರಗಳು ಮುರಿದು ಬೀಳುವ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಸಮಾಜಸೇವಕ ಆರೀಫ್ ಹಾಗೂ ಸ್ಥಳೀಯರು ರಸ್ತೆ ಮೇಲೆ ಬಿದ್ದ ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ ಬಳಿಕ ವಾಹನ ಸಂಚಾರ ಪುನರಾರಂಭವಾಯಿತು.
ಚಾರ್ಮಾಡಿ ಘಾಟಿ ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಜೀವನಾಡಿಯಾಗಿದ್ದು, ಪ್ರತಿದಿನ ನೂರಾರು ವಾಹನಗಳು, ಸರ್ಕಾರಿ ಮತ್ತು ಖಾಸಗಿ ಬಸ್‌ಗಳು, ಆಂಬುಲೆನ್ಸ್‌ಗಳು ಹಾಗೂ ತರಕಾರಿ ಸಾಗಣೆ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಕೇವಲ ಅರ್ಧ ಗಂಟೆ ಸಂಚಾರ ಸ್ಥಗಿತಗೊಂಡರೂ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಹವಾಮಾನ ಇಲಾಖೆ ಇನ್ನಷ್ಟು ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತ ಮತ್ತು ಮರಗಳು ಬೀಳುವ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು ಅತೀವ ಎಚ್ಚರಿಕೆ ಹಾಗೂ ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
Traffic jam at Charmadi Ghat due to traffic stoppage
Leave a comment