ಮೂಡಿಗೆರೆ: ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣದ ಆರೋಪಿಗೆ ಚಿಕ್ಕಮಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಎಂಟು ವರ್ಷ, ಒಂದು ತಿಂಗಳು ಮತ್ತು ಎರಡು ದಿನಗಳ ಕಾಲ ಸಾಧಾರಣ ಜೈಲು ಶಿಕ್ಷೆ ಹಾಗೂ 35,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
2018ರ ಜನವರಿ 22ರಂದು ಅಸ್ತಿ ಮತ್ತು ಜಾಗದ ವಿಚಾರವಾಗಿ ಉಂಟಾದ ಜಗಳದ ಹಿನ್ನೆಲೆಯಲ್ಲಿ ಅಂಬಿಕಾ ಎಂಬುವವರು ಅದೇ ಗ್ರಾಮದ ನಿವಾಸಿ ಸಂಜೀವ ಎಂಬುವವರನ್ನು ಕೊಲೆ ಮಾಡಿದ್ದರು. ಕೃತ್ಯದ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮರುದಿನ ಬೆಳಿಗ್ಗೆ ಶವಕ್ಕೆ ಟೈರ್ ಮತ್ತು ಒಣ ಎಲೆಗಳನ್ನು ಹಾಕಿ ಸುಟ್ಟು ಹಾಕುವ ಮೂಲಕ ಕ್ರೌರ್ಯ ಮೆರೆದಿದ್ದರು. ಈ ಸಂಬಂಧ ಮೃತರ ಸಹೋದರ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಅಂಬಿಕಾ ವಿರುದ್ಧದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ, ಈಗಾಗಲೇ ಆಕೆ ನ್ಯಾಯಾಂಗ ಬಂಧನದಲ್ಲಿ ಕಳೆದ ಅವಧಿಯನ್ನೇ ಶಿಕ್ಷೆಯಾಗಿ ಪರಿಗಣಿಸಿ ಆದೇಶ ಹೊರಡಿಸಿದೆ. ದಂಡದ ಮೊತ್ತ 35,000 ರೂ. ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಎರಡು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಅಂದಿನ ಮೂಡಿಗೆರೆ ವೃತ್ತ ನಿರೀಕ್ಷಕ ಜಗದೀಶ್ ಎಂ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ಸರ್ಕಾರದ ಪರವಾಗಿ ಅಭಿಯೋಜಕಿ ವೀಣಾ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ತನಿಖಾ ತಂಡದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮಯೋಚಿತ ಕರ್ತವ್ಯದ ಫಲವಾಗಿ ಎಂಟು ವರ್ಷಗಳ ನಂತರ ಈ ಪ್ರಕರಣದ ಆರೋಪಿಗೆ ಶಿಕ್ಷೆಯಾಗಿದೆ.
Prison sentence and fine for gruesome murder accused
Leave a comment