ಚಿಕ್ಕಮಗಳೂರು: ಸರ್ಕಾರದ ನಿರ್ದೇಶನದಂತೆ ಜಿಲ್ಲೆಗೆ ಅಗತ್ಯವಿರುವ ೧೨ ವಿವಿಧ ರೀತಿಯ ಸನ್ನದುಗಳನ್ನು ಸರ್ಕಾರದ ನಿಯಮಾನುಸಾರ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಸಮುದಾಯವಾರು ಮೀಸಲಿಟ್ಟು ಪಾರದರ್ಶಕವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದಾವಣಗೆರೆ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಬಿ.ಎಂ.ಅಶ್ವಿನಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಅಬಕಾರಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅರ್ಜಿದಾರರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇ-ಹರಾಜು ಜನವರಿ ೧೩ ರಂದು ಪ್ರಾರಂಭವಾಗಲಿದ್ದು, ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ ಯಾವ ರೀತಿಯಲ್ಲಿ ಹರಾಜಿನಲ್ಲಿ ಭಾಗವಹಿಸಬೇಕು ಎಂಬ ಬಗ್ಗೆ ತರಬೇತುದಾರರು ತಿಳಿಸಿಕೊಡಲಿದ್ದಾರೆ. ಎಲ್ಲರಿಗೂ ಇದೊಂದು ಸುವರ್ಣಾವಕಾಶವಾಗಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಚಿಕ್ಕಮಗಳೂರು ಅಬಕಾರಿ ಉಪ ಆಯುಕ್ತರಾದ ಎಂ.ರೂಪ ಅವರು, ರಾಜ್ಯ ಅಬಕಾರಿ ಇಲಾಖೆ ರಾಜ್ಯದ ಎರಡನೇ ಅತೀದೊಡ್ಡ ರಾಜಸ್ವ ಸಂಗ್ರಹ ಇಲಾಖೆಯಾಗಿದೆ. ೨೦೨೬ನೇ ಸಾಲಿನಲ್ಲಿ ೪೩ ಸಾವಿರ ಕೋಟಿ ರೂ.ಗಳ ಸಂಗ್ರಹ ಗುರಿಯನ್ನು ಹೊಂದಿದೆ. ಜಿಲ್ಲೆಯಲ್ಲಿ ಒಟ್ಟಾರೆ ೨೬೭ ಸನ್ನದುಗಳು ಕಾರ್ಯ ನಿರ್ವಹಿಸುತ್ತಿವೆ. ಉಳಿದ ೧೨ ಸನ್ನದುಗಳ ಪ್ರಕ್ರಿಯೆ ಜಾರಿಯಲ್ಲಿದ್ದು, ಅಗತ್ಯ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ವಿವಿಧ ತಾಲ್ಲೂಕುಗಳ ಅರ್ಜಿದಾರರು ಸರ್ಕಾರ ನೀಡಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಅಬಕಾರಿ ಉಪ ಆಯುಕ್ತ ವೀರೇಶ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂಎಸ್‌ಟಿಸಿ ತಂಡದವರಾದ ಬ್ರಿಜೇಶ್ ಮತ್ತಿತರರು ತರಬೇತಿ ನೀಡಿದರು. ಕಡೂರು ವಲಯದ ಅಬಕಾರಿ ನಿರೀಕ್ಷಕರಾದ ಎಲ್.ಸಿ.ಸಂದೀಪ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೂಡಿಗೆರೆ ಉಪವಿಭಾಗದ ಉಪ ಅಧೀಕ್ಷಕ ಕೀರ್ತಿ ಕುಮಾರ್ ವಂದಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಅರ್ಜಿದಾರರು ಹಾಗೂ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.
Excise Department takes steps to distribute charters transparently in the district
Leave a comment