ಚಿಕ್ಕಮಗಳೂರು: ವಿಧಾನಸೌದದಲ್ಲಿ ಅರಣ್ಯ ಮತ್ತು ಕಂದಾಯ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯ ನಿರ್ಣಯದಂತೆ ಡೀಮ್ಡ್ ಅರಣ್ಯ ಪಟ್ಟಿ ಪರಿಷ್ಕರಿಸಲು ವಿಳಂಬ ಮಾಡುತ್ತಿರುವ ಅಧಿಕಾರಿಗಳು ಮತು ಎಫ್ಎಸ್ಒಗಳ ವಿರುದ್ಧ ದೊಡ್ಡಮಟ್ಟದ ಹೋರಾಟ ರೂಪಿಸಲು ನಿರ್ಧರಿಸಿರುವುದಾಗಿ ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ತಿಳಿಸಿದೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಎಸ್.ವಿಜಯ್ಕುಮಾರ್, ಕಂದಾಯ ಮತ್ತು ಅರಣ್ಯ ಸಚಿವರು ಬೆಂಗಳೂರಿನ ಸಭೆಯಲ್ಲಿ ನಿರ್ಣಯಿಸಿದಂತೆ ಅಂಶಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಎಫ್ಎಸ್ಒ ಅನುಷ್ಠಾನ ಮಾಡುತ್ತಿಲ್ಲ. ಅಲ್ಲಿಂದ ಚೆಕ್ಲಿಸ್ಟ್ ಕಳುಹಿಸಿ ೩ ತಿಂಗಳಾದರೂ ಅದನ್ನು ಅನುಷ್ಠಾನ ಮಾಡದೆ ಅವರ ಮೂಗಿನ ನೇರಕ್ಕೆ ಕೂತಲ್ಲೇ ವರದಿ ತಯಾರಿಸಲು ಚಿಂತನೆ ನಡೆಸಿದ್ದು ಇವರ ವಿರುದ್ಧವೇ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಸಮಿತಿ ನಿರ್ಧರಿಸಿದೆ ಎಂದು ಹೇಳಿದರು.
ನವೆಂಬರ್ ಒಳಗೆ ಸುಪ್ರೀಂಕೋರ್ಟಿಗೆ ಡೀಮ್ಡ್ ಪರಿಷ್ಕೃತ ವರದಿಯನ್ನು ಸಲ್ಲಿಸಬೇಕಿದ್ದು, ಇನ್ನೊಂದು ತಿಂಗಳು ಬಾಕಿ ಇದೆ. ಹೀಗಾಗಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುವ ರೈತರ, ಸಾಗುವಳಿದಾರರ, ೯೪ಸಿ ಅರ್ಜಿದಾರರ, ಗ್ರಾಮ, ಸ್ಮಶಾನ, ಶಾಲೆ, ಅಂಗನವಾಡಿಯಂತಹ ಸರಕಾರಿ ಅವಶ್ಯಕತೆಗಳ ಜತೆಗೆ ನಿವೇಶನ ರಹಿತರಿಗೆ ನಿವೇಶನ ನೀಡಲು ಬೇಕಾಗುವಷ್ಟು ಭೂಮಿಯನ್ನು ಗುರುತಿಸಿ ಅದನ್ನು ಡೀಮ್ಡ್ ಪಾರೆಸ್ಟ್ನಿಂದ ಕೈಬಿಟ್ಟು ಹೊಸ ಪಟ್ಟಿ ಸಲ್ಲಿಸಲು ಇನ್ನಾದರೂ ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು ಎಂದರು.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು ಮತ್ತಿತರೆ ಸಿಬ್ಬಂದಿ ನೇಮಿಸಿ ನಿಖರವಾದ ಕಂದಾಯ ಬಳಕೆಯ ಭೂಮಿಯನ್ನು ಗುರುತಿಸಬೇಕು. ಈ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸರಕಾರ ನಿಗತ ಮಾಹಿತಿಯುಳ್ಳ ಪಟ್ಟಿಯನ್ನು ನೀಡಿದೆ. ಈ ಪಟ್ಟಿಯಂತೆ ಅರಣ್ಯ ಎಫ್ಎಸ್ಒ ಅಧಿಕಾರಿಗಳು ಸಂಪೂರ್ಣ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ ಎಂದರು.
ದರಖಾಸ್ತು ಜಮೀನು, ನಮೂನೆ ೫೦-೫೩ ರ ಜಮೀನಿಗೆ ಪೋಡಿ ಸಮಸ್ಯೆ ಕಾಡುತ್ತಿದ್ದು ಶೀಘ್ರದಲ್ಲಿ ಪೋಡಿ ಅಂತಿಮಗೊಳಿಸಬೇಕು. ನಗರ ಗಡಿಯಿಂದ ೫ ಕಿಮೀ ವ್ಯಾಪ್ತಿಯೊಳಗಿನ ಭೂಮಂಜೂರಾತಿಗಳನ್ನು ಕಾರಣ ಕೇಳಿ ನೊಟೀಸ್ ನೀಡುತ್ತಿರುವ ಕ್ರಮವನ್ನು ಸಮಿತಿ ಖಂಡಿಸುತ್ತದೆ. ಮಲೆನಾಡಿನ ಭೂಮಿಯ ಏರಿಳಿತಕ್ಕೆ ತಕ್ಕಂತೆ ನೇರಮಾರ್ಗ ಅಂತರವನ್ನು ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ಏರಿಯಲ್ ಅಂತರ ಪರಿಗಣಿಸಬಾರದು. ಹಲವು ವರ್ಷದಿಂದ ಅನುಭವದಲ್ಲಿರುವ ರೈತರಿಗೆ ನೀಡಲಾಗಿರುವ ಮಂಜೂರಾತಿಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ನಗರದ ಆಜುಬಾಜಿನ ಸಿಡಿಎ ವ್ಯಾಪ್ತಿಯ ಹಲವು ಪ್ರದೇಶಗಳನ್ನು ಯಾವದೇ ಅರಣ್ಯ ವ್ಯಾಪ್ತಿಯ ಅಧಿಕೃತ ದಾಖಲೆ ಇಲ್ಲದೆ ಇದ್ದರೂ ಸಿಡಿಎ ನಕ್ಷೆಯಲ್ಲಿ ಮೀಸಲು ಅರಣ್ಯ ಎಂದು ಸ್ವಯಂ ಘೋಷಣೆ ಮಾಡಿಕೊಂಡು ನಗರದ ಅಭಿವೃದ್ಧಿಗೆ ಮಾರಕವಾಗುವಂತಹ ನಕ್ಷೆ ತಯಾರಿಸಿರುವ ಅಧಿಕಾರಿಗಳ ಮೇಲೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬೆಳೆಗಾರ ಮುಖಂಡರಾದ ರಘು, ಪೂರ್ಣೇಶ್, ಕಳಸಪ್ಪ, ರವಿಕುಮಾರ್, ಈಶ್ವರ್, ಶಂಕರ್, ಕುಮಾರಸ್ವಾಮಿ ಇದ್ದರು.
Large-scale struggle against those delaying the revision of the deemed forest list
Leave a comment