ಚಿಕ್ಕಮಗಳೂರು: ಟಿ.ವಿ. ಖರೀದಿ ಸಂದರ್ಭ ಅನುಚಿತ ನೀತಿ ಅನುಸರಿಸಿದ ಕಾರಣಕ್ಕಾಗಿ ಖರೀದಿದಾರರಿಗೆ ಪರಿಹಾರ, ಖರ್ಚು-ವೆಚ್ಚ ಮತ್ತು ಖರೀದಿ ಸಂದರ್ಭ ಪಡೆದಿದ್ದ ಹೆಚ್ಚುವರಿ ಮೊತ್ತವನ್ನು ಬಡ್ಡಿ ಸೇರಿಸಿ ನೀಡುವಂತೆ ಕಡೂರಿನ ಪೂರ್ವಿಕಾ ಮೊಬೈಲ್ ಅಂಗಡಿ ಹಾಗೂ ಬಜಾಜ್ ಫೈನಾನ್ಸ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ನೀಡಿದೆ.
ಕಡೂರು ಮಲ್ಲೇಶ್ವರಂನ ಮಾರುತಿ ಬಡಾವಣೆಯ ಜಿ.ಅಂಬಿಕಾ ಎಂಬುವವರು ಅಲ್ಲಿನ ಪೂರ್ವಿ ಮೊಬೈಲ್ ಅಂಗಡಿಯಿಂದ ೨೦೨೩ ರಲ್ಲಿ ಟಿ.ವಿ.ಯನ್ನು ಖರೀದಿಸಿದ್ದರು. ಟಿ.ವಿ. ಖರೀದಿಗೆ ಬಜಾಜ್ ಫೈನಾನ್ಸ್‌ನಿಂದ ಖರೀದಿದಾರರಿಗೆ ಸಾಲ ಒದಗಿಸಲಾಗಿತ್ತು. ಈ ಸಂದರ್ಭ ೧೩,೩೬೦ ರೂ.ಗಳನ್ನು ಹೆಚ್ಚುವರಿಯಾಗಿ ಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂಬಿಕಾ ಅವರು ಪೂರ್ವಿಕಾ ಅಂಗಡಿಯ ವ್ಯವಸ್ಥಾಪಕರು ಹಾಗೂ ಬಜಾಜ್ ಫೈನಾನ್ಸ್‌ನ ಕಡೂರು ಹಾಗೂ ಬೆಂಗಳೂರು ಕಚೇರಿಯ ವ್ಯವಸ್ಥಾಪಕರನ್ನು ಎದುರುದಾರರನ್ನಾಗಿ ಮಾಡಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಹೆಚ್ಚುವರಿಯಾಗಿ ಪಡೆದ ೧೩,೩೬೦ ರೂ.ಗಳಿಗೆ ಶೇ.೯ರ ವಾರ್ಷಿಕ ಬಡ್ಡಿಯೊಂದಿಗೆ ೨೦೨೩ರ ಡಿಸೆಂಬರ್ ೪ ರಿಂದ ತೀರ್ಪು ಪ್ರಕಟಿಸಿದ ೨೦೨೫ರ ಜುಲೈ ೨೫ರವರೆಗೆ ಪಾವತಿಸುವಂತೆ ಮತ್ತು ಪರಿಹಾರವಾಗಿ ೫ ಸಾವಿರ ರೂ. ಹಾಗೂ ಪ್ರಕರಣದ ಖರ್ಚು-ವೆಚ್ಚವೆಂದು ೫ ಸಾವಿರ ರೂ.ಗಳನ್ನು ನೀಡುವಂತೆ ಆದೇಶ ನೀಡಿದೆ.
ಆಯೋಗದ ಅಧ್ಯಕ್ಷರಾದ ಎನ್.ಚೆನ್ನಕೇಶವ ಮತ್ತು ಸದಸ್ಯರಾದ ಈ.ಪ್ರೇಮಾ ಅವರು ಈ ತೀರ್ಪು ನೀಡಿದ್ದು. ಎದುರುದಾರರ ಅನುಚಿತ ವ್ಯಾಪಾರ ನೀತಿಯನ್ನು ಎತ್ತಿ ಹಿಡಿದು ಗ್ರಾಹಕರಿಗೆ ನ್ಯಾಯ ಒದಗಿಸಿದ್ದಾರೆ. ಪ್ರಕರಣದಲ್ಲಿ ದೂರುದಾರರ ಪರವಾಗಿ ವಕೀಲ ಸಿ.ವಿ.ಲೋಕೇಶ್ ಅವರು ವಾದ ಮಂಡಿಸಿದ್ದರು.
Order for redress against unfair trade practices
Leave a comment