ಚಿಕ್ಕಮಗಳೂರು: ಹಿಂದೂಗಳ ಶ್ರದ್ಧಾಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸಿ ಕ್ಷೇತ್ರದ ಪಾವಿತ್ರ್ಯಕ್ಕೆ ಕಳಂಕ ತರುವ ಷಡ್ಯಂತ್ರ ರೂಪಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಆ.೧೩ ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನೆಡೆಸಲು ಬಿಜೆಪಿ ನಿರ್ಧರಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಬಿಜೆಪಿ ವಕ್ತಾರ ಸಿ.ಹೆಚ್. ಲೋಕೇಶ್ ಅನಾಮದೇಯ ವ್ಯಕ್ತಿಯೊಬ್ಬ ಹತ್ತಾರು ಹೆಣಗಳನ್ನು ಹೂತಿರುವುದಾಗಿ ನೀಡಿದ ಹೇಳಿಕೆಯನ್ನೇ ಗಂಭಿರವಾಗಿ ಪರಿಗಣಿಸಿದ ರಾಜ್ಯಸರ್ಕಾರ ಆತನಿಗೆ ಭದ್ರತೆ ನೀಡಿ ಶವಗಳ ಪತ್ತೆಗೆ ಅಧಿಕಾರಿಗಳು ಮತ್ತು ಕಾರ್ಮಿಕರನ್ನು ಬಳಸಿ ಉತ್ಖನನ ನಡೆಸುವ ಮೂಲಕ ಕ್ಷೇತ್ರದ ಬಗ್ಗೆ ಹಿಂದೂ ಸಮಾಜದಲ್ಲಿ ಅನುಮಾನ ಮೂಡಿಸುವ ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಎಡಪಂಥೀಯರ ಒತ್ತಡಕ್ಕೆ ಮಣಿದು ಪ್ರಕರಣವನ್ನು ಎಸ್ಐಟಿ ಗೆ ನೀಡಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಹಿರಂಗಪಡಿಸಿದ್ದಾರೆ. ಸರ್ಕಾರ ಈಗಾಗಲೇ ಹಲವು ಹಿಂದು ವಿರೋಧಿ ನಿರ್ಧಾರಗಳನ್ನು ಕೈಗೊಂಡು ಧರ್ಮಸ್ಥಳದ ಪವಿತ್ರ ಕ್ಷೇತ್ರವನ್ನು ಅಪವಿತ್ರಗೊಳಿಸಲು ಮುಂದಾಗಿವೆ ಎಂದು ದೂರಿದರು.
ಶ್ರೀ ಕ್ಷೇತ್ರದ ಪಾವಿತ್ರ್ಯತೆಗೆ ಭಂಗ ತಂದು ವಾಮಮಾರ್ಗದ ಮೂಲಕ ಅಪನಂಬಿಕೆ ಮೂಡಿಸಿ ಕ್ಷೇತ್ರದ ಬಗ್ಗೆ ಶ್ರದ್ಧೆಯನ್ನು ಕುಗ್ಗಿಸಿ ಹಿಂದೂ ಸಮಾಜವನ್ನು ದುರ್ಬಲಗೊಳಿಸುವ ಮೂಲಕ ಒಗ್ಗಟ್ಟು ಮುರಿಯಲು ಸರ್ಕಾರವೇ ಮುಂದಾಗಿರುವುದು ವಿಪರ್ಯಾಸ ಎಂದರು.
ಸೌಜನ್ಯ ಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಈ ರೀತಿಯ ಕುತಂತ್ರಗಳನ್ನು ಸಮಾಜ ವಿರೋಧಿಗಳು ಹೆಣದ ಕಾರಣ ಆರಂಭದಲ್ಲಿ ಹಿಂದೂ ಸಮಾಜ ಮೌನವಾಗಿತ್ತು. ಸೌಜನ್ಯಳಿಗೆ ನ್ಯಾಯ ಸಿಗಬೇಕು ಎನ್ನುವ ಕಾರಣಕ್ಕೆ ದಿನಕಳೆದಂತೆ ಕುತಂತ್ರಿಗಳ ಗುರಿ ಶ್ರೀ ಕ್ಷೇತ್ರ ಎನ್ನುವುದು ಬಹಿರಂಗವಾಗಿದೆ ಎಂದರು.
ಹಿಂದೂ ಸಮಾಜ ಎಚ್ಚೆತ್ತುಕೊಂಡಿದ್ದು, ಷಡ್ಯಂತ್ರವನ್ನು ಮುಂದುವರೆಸಿದರೆ ತಕ್ಕ ಶಾಸ್ತಿ ಮಾಡಲಿದೆ ಎಂದು ಎಚ್ಚರಿಸಿದ ಅವರು, ಹಿಂದೂ ಸಮಾಜದ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ತರುವವರ ವಿರುದ್ಧ ಬಿಜೆಪಿ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕ್ತಾರರಾದ ಸೋಮಶೇಖರ್ ಬಿ.ಜೆ, ಹೆಚ್.ಎಸ್. ಪುಟ್ಟಸ್ವಾಮಿ, ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಡಿ. ರಾಜಪ್ಪ, ಮಾಧ್ಯಮ ಪ್ರಮುಖ್ ದಿನೇಶ್ ಕೋಟೆ, ಸುರೇಶ್ ಉಪಸ್ಥಿತರಿದ್ದರು.
Massive protest in the city condemning misinformation about Dharmasthala
Leave a comment