ಚಿಕ್ಕಮಗಳೂರು: ರೈತರು, ಬೆಳೆಗಾರರ ಪಾಲಿಗೆ ನೇಣಿನ ಕುಣಿಕೆಯಂತಾಗಿರುವ ಸರ್ಫೇಸಿ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ವಿವಿಧ ಪಕ್ಷ-ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಇಂದು ನಡೆದ ಜೆಡಿಎಸ್, ಸಿಪಿಐ, ರೈತ ಸಂಘ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ರಾಜ್ಯ ವಕ್ತಾರ ಎಚ್.ಎಚ್. ದೇವರಾಜ್ ಮಾತನಾಡಿ, ಸರ್ಫೇಸಿ ಕಾಯ್ದೆಯನ್ನು ಮುಂದಿಟ್ಟುಕೊಂಡು ಬೆಳೆಗಾರರ ತೋಟಗಳನ್ನು ಹರಾಜು ಹಾಕುವ ಮೂಲಕ ಬ್ಯಾಂಕುಗಳು ದೌರ್ಜನ್ಯ ನಡೆಸುತ್ತಿವೆ. ಈ ರೀತಿಯ ಹಿಟ್ಲರ್ ಸಂಸ್ಕೃತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಕಾಫಿ ಬೆಳೆಗಾರರು-ರೈತರ ಸಮಸ್ಯೆ ಬಗ್ಗೆ ಎಲ್ಲಾ ಸಂಸದರು ಸಂಸತ್‌ನಲ್ಲಿ ಧ್ವನಿಎತ್ತಿ ಸಮಸ್ಯೆ ಬಗೆಹರಿಸಬೇಕು ಈ ನಿಟ್ಟಿನಲ್ಲಿ ವಿಫಲರಾಗಿದ್ದಾರೆ. ರಕ್ಷಣೆ ಮಾಡಬೇಕಾದವರೇ ವಿರೋಧಿಗಳಾಗಿದ್ದಾರೆ. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ವಿದರ್ಭ ಪ್ಯಾಕೇಜ್ ನೀಡಿ ರೈತರಿಗೆ ಸ್ಪಂದಿಸಿದ್ದರು. ಇದೇ ಮಾದರಿಯಲ್ಲಿ ಈಗಿನ ಕೇಂದ್ರ ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಬ್ಯಾಂಕರ್‍ಸ್‌ಗಳೊಂದಿಗೆ ಸಭೆ ನಡೆಸಿದ ನಂತರ ಸಾವಿರಾರು ಜನ ಬೆಳೆಗಾರರ ಆಸ್ತಿ ಹರಾಜು ಮಾಡಲಾಗಿದೆ. ಇನ್ನೂ ಮೂರು ಸಾವಿರಕ್ಕೂ ಹೆಚ್ಚು ಬೆಳೆಗಾರರ ಆಸ್ತಿ ಹರಾಜಿಗೆ ಮುಂದಾಗಿದೆ ಎಂದು ದೂರಿದರು.
ಬೆಳೆಗಾರರು ಸಾಲ ತೀರಿಸಲಾಗದ ಸ್ಥಿತಿಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಕಪ್ಪುಹಣ ಹೊಂದಿರುವವರು, ರಿಯಲ್ ಎಸ್ಟೇಟ್ ಏಜೆನ್ಸಿಗಳು, ಬ್ಯಾಂಕ್ ಅಧಿಕಾರಿಗಳು ಕಮಿಷನ್ ಆಸೆಗಾಗಿ ಸರ್ಫೇಸಿ ಕಾಯಿದೆ ಹೆಸರಲ್ಲಿ ತೋಟಗಳನ್ನು ಮಾರುಕಟ್ಟೆ ಬೆಲೆಗಿಂತಲೂ ಅತ್ಯಂತ ಕಡಿಮೆ ಬೆಲೆಗೆ ಹರಾಜು ಹಾಕುತ್ತಿದ್ದು, ಬೆಳೆಗಾರರು ಬೀದಿಗೆ ಬೀಳುತ್ತಿದ್ದಾರೆ ಎಂದು ಹೇಳಿದರು.
ಮೂಡಿಗೆರೆ ತಾಲ್ಲೂಕು ದೇವೃಂದದ ಡಿ.ಆರ್.ವಿಜಯ ಅವರು ೪ ಎಕರೆ ಕಾಫಿತೋಟದ ದಾಖಲೆ ನೀಡಿ, ೨೫ ಲಕ್ಷ ರೂ. ಅವರ ಪತ್ನಿ ಪಾರ್ವತಿ ವಿಜಯ್ ಹೆಸರಿನಲ್ಲಿ ೩.೩೯ ಎಕರೆ ಜಮೀನಿನ ದಾಖಲೆ ನೀಡಿ ೬ ಲಕ್ಷ ಸೇರಿ ಒಟ್ಟು ೩೨ ಲಕ್ಷ ರೂ. ಸಾಲ ಪಡೆದಿದ್ದಾರೆ. ಸಾಲದ ಕಂತಿನ ಬಾಬ್ತು ಕಳೆದ ಜನವರಿಯಲ್ಲಿ ೫.೩೦ ಲಕ್ಷ ರೂ.ಪಾವತಿಸಿದ್ದರೂ ಸರ್ಫೇಸಿ ಬಳಸಿಕೊಂಡು ಅವರ ಆಸ್ತಿಯನ್ನು ಬ್ಯಾಂಕು ೮೮ ಲಕ್ಷ ರೂ.ಗಳಿಗೆ ಹರಾಜು ಹಾಕಿದೆ. ಆದರೆ ಇದರ ಮಾರುಕಟ್ಟೆ ಬೆಲೆ ಇದರ ಮೂರುಪಟ್ಟು ಹೆಚ್ಚಿದೆ. ಈಗ ಜಮೀನು ಕಳೆದುಕೊಂಡಿರುವ ದಂಪತಿ ದಯಾ ಮರಣ ಕೋರಿ ಅರ್ಜಿಸಿ ಸಲ್ಲಿಸಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಹದ್ದು ಎಂದರು.
ಕೇರಳ, ತಮಿಳುನಾಡುಗಳಲ್ಲೂ ಪ್ಲಾಂಟೇಷನ್ ಬೆಳೆಗಳಿದ್ದರೂ ಅಲ್ಲಿ ಸರ್ಫೇಸಿ ಕಾಯ್ದೆ ಅನ್ವಯವಾಗುವುದಿಲ್ಲ. ಈ ತೊಂದರೆ ತಪ್ಪಿಸಲು ಪ್ಲಾಂಟೇಷನ್ ವ್ಯಾಪ್ತಿಯ ಎಲ್ಲಾ ಸಂಸದರು ಕಾಯಿದೆ ವಜಾಗೊಳಿಸಲು ಕೇಂದ್ರವನ್ನು ಒತ್ತಾಯಿಸಬೇಕಿದೆ. ಕರಾಳ ಕಾಯಿದೆ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ. ಬಸವರಾಜು, ಮುಖಂಡ ಗುರುಶಾಂತಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್, ಜೆಡಿಎಸ್ ಮುಖಂಡ ಎಚ್.ಎಸ್. ಮಂಜಪ್ಪ, ಕೆಪಿಸಿಸಿ ರಾಜ್ಯ ವಕ್ತಾರ ರವೀಶ್ ಕ್ಯಾತನಬೀಡು ಇದ್ದರು.
Demand for repeal of the Sarfasi Act which is a noose for farmers
Leave a comment