ಚಿಕ್ಕಮಗಳೂರು: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಫಲವತ್ತಾದ ಕೃಷಿ ಭೂಮಿಯನ್ನು ಕೆ.ಐ.ಎಡಿಬಿಗೆ ವಹಿಸುವ ನಿರ್ಧಾರ ವಿರೋಧಿಸಿ ಸಮಾವೇಶ ನಡೆಸಿದ ಹೋರಾಟಗಾರರನ್ನು ಬಂಧಿಸಿರುವ ಕ್ರಮ ಖಂಡಿಸಿ ಹಾಗೂ ಅನ್ಯ ಉದ್ದೇಶಕ್ಕೆ ಕೃಷಿ ಭೂಮಿ ಬಳಕೆ ಕೈಬಿಡಬೇಕು ಎಂದು ಒತ್ತಾಯಿಸಿ, ಸಂಯುಕ್ತ ಹೋರಾಟ ಸಮಿತಿಯಿಂದ ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಚನ್ನರಾಯಪಟ್ಟಣ ಹೋಬಳಿಯ ವಿವಿಧ ಹಳ್ಳಿಗಳ 1777 ಎಕರೆ ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಸರ್ಕಾರ ಕೆಐಎಡಿಬಿಗೆ ವರ್ಗಾಯಿಸುವ ನಿರ್ಧಾರ ಕೈಗೊಂಡಿದೆ. ಇದನ್ನು ವಿರೋಧಿಸಿ ಆ ಭಾಗದ ರೈತರು ಕಳೆದ ಮೂರು ವರ್ಷದಿಂದ ನಿರಂತರ ಧರಣಿ ಮಾಡುತ್ತಿದ್ದಾರೆ. ರೈತರ ವಿರೋಧವನ್ನು ಲೆಕ್ಕಿಸದೆ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ರಸ್ತೆ ನಗರೀಕರಣ ಕೈಗಾರಿಕೆ ನೀರಾವರಿ ವಸತಿ ಹೀಗೆ ಹಲವು ಯೋಜನೆಗಳಿಗೆ ಶೇ. 30ರಷ್ಟು ರೈತರ ಫಲವತ್ತಾದ ಭೂಮಿ ಬಳಕೆಯಾಗುತ್ತಿದೆ. ಇದು ಹೀಗೆ ಮುಂದುವರಿದಲ್ಲಿ ಕೃಷಿಭೂಮಿ ಕಿರಿದಾಗಿ ದೇಶಕ್ಕೆ ಆಹಾರದ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಕೃಷಿ ಯೋಗ್ಯ ಭೂಮಿಯನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಕೆ ಮಾಡಬಾರದು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಮತ್ತಿತರರಿದ್ದರು.
Listen to the people’s problems to organize the party from the grassroots level
Leave a comment