ಚಿಕ್ಕಮಗಳೂರು: ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಹಾಗೂ ಅದರ ವಿವಿಧ ಸಂಸ್ಥೆಗಳು, ದೇಶದ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಈ ಮುಂಗಾರು ಹಂಗಾಮಿನಲ್ಲಿ ಕೃಷಿಕರಿಗೆ ತಾಂತ್ರಿಕತೆಗಳು ಲಭ್ಯವಾಗುವಂತೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಮೇ ೨೯ ರಿಂದ ಜೂನ್ ೧೨ರವರೆಗೆ ಹಮ್ಮಿಕೊಳ್ಳಲಾಗಿದೆ.
ಈ ವಿನೂತನ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರ ಕಡೆ ತೆರಳಿ, ಜಿಲ್ಲೆಯ ಎಲ್ಲ ರೈತರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ನೀಡುವುದು ಈ ಅಭಿಯಾನದ ಉದ್ದೇಶವಾಗಿದ್ದು, ಇಲ್ಲಿ ರೈತರನ್ನು ಒಗ್ಗೂಡಿಸಿ ನೂತನ ತಂತ್ರಜ್ಞಾನಗಳು, ಹೊಸ ತಳಿಗಳು ಮತ್ತು ಬೀಜಗಳು, ನಿಖರವಾದ ಹವಾಮಾನದ ಮಾಹಿತಿ ಮತ್ತು ಸರ್ಕಾರದ ನಾನಾ ಲಾಭದಾಯಕ ಯೋಜನೆಗಳು, ಕೃಷಿಯಲ್ಲಿ ಹೆಚ್ಚಿನ ಲಾಭವನ್ನು ಹೇಗೆ ಪಡೆಯಬಹುದು ಎಂಬ ಬಗ್ಗೆ ಮಾಹಿತಿ ನೀಡಲಾಗುವುದು. ರೈತರು ನೀಡುವ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಅವರ ಹೊಸ ಆವಿಷ್ಕಾರಗಳನ್ನು ಸಂಶೋಧನೆ ಮತ್ತು ಪ್ರಸಾರ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ.
ಬೆಳೆ, ಮಣ್ಣು ಮತ್ತು ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ತಜ್ಞರಿಂದ ಸಲಹೆಗಳನ್ನು ನೀಡಲಾಗುತ್ತದೆ. ಜೊತೆಗೆ ಸರ್ಕಾರದ ಯೋಜನೆಗಳ ಲಾಭ ಪಡೆಯುವ ವಿಧಾನಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.
ಜಿಲ್ಲೆಯ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ತಂಡ ಭೇಟಿ ನೀಡುವ ಬಗ್ಗೆ ಅಲ್ಲಿನ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ತಂಡ ಆಯಾ ಗ್ರಾಮಗಳಿಗೆ ಬಂದಾಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಕಾರ್ಯಕ್ರಮದ ಲಾಭ ಪಡೆದು ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬಹುದು ಎಂದು ಚಿಕ್ಕಮಗಳೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಎ.ಟಿ.ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
Developed Agriculture Sankalpa Campaign from May 29th
Leave a comment