ಚಿಕ್ಕಮಗಳೂರು : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ದಾಳಿ ವಿಚಾರ ತೀವ್ರ ಸ್ವರೂಪ ಪಡೆಯುತ್ತಿದ್ದು ಇದನ್ನು ಖಂಡಿಸಿ ಬಿಜೆಪಿ ಪಕ್ಷದ ವತಿಯಿಂದ ಚಿಕ್ಕಮಗಳೂರು ಡಿ.ಎಫ್.ಓ ಕಛೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಪ್ರಮಾಣದ ಕಾಫಿ ಸೇರಿದಂತೆ ಹಲವು ಬೆಳೆಗಳು, ತೋಟಗಳು ನಷ್ಟವಾಗಿದೆ. ನಿರಂತರ ದಾಳಿಯಿಂದಾಗಿ ಮಲೆನಾಡಿನ ರೈತರ ಬದುಕೆ ಮಂಕಾಗಿದೆ. ಇಷ್ಟೆಲ್ಲಾ ಅವಾಂತರಗಳು ಸೃಷ್ಟಿಯಾಗಿದ್ದರು ರಾಜ್ಯ ಸರ್ಕಾರ ಜಿಲ್ಲೆಯ ಮಲೆನಾಡಿನ ಬಗ್ಗೆ ನಿರ್ಲಕ್ಷ ವಹಿಸಿದೆ ಎಂದು ಆರೋಪಿಸಿ ಬಿಜೆಪಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು. ಪ್ರತಿಭಟನೆ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ ಜಿಲ್ಲಾ ಮಂತ್ರಿ, ಜಿಲ್ಲಾಧಿಕಾರಿ ಡಿಎಫ್‌ಓ ಸಮಸ್ಯೆ ಕುರಿತು ಬಾಯನ್ನೇ ಬಿಡುತ್ತಿಲ್ಲ. ಸರ್ಕಾರ, ಜಿಲ್ಲಾಡಳಿತ ಇದೆಯೋ, ಇಲ್ಲವೋ ಎನ್ನುವ ಸಂಶಯ ಮೂಡಿಸುತ್ತಿದೆ. ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಸಾವು ನೋವುಗಳಿಗೆ ಮಿತಿ ಇಲ್ಲದಂತಾಗಿದೆ. ಪರಿಹಾರಕ್ಕಾಗಿ ಎಷ್ಟೇ ಅಲೆದಾಡಿದರು ಅಧಿಕಾರಿಗಳು ಮಾತು ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ತೊಂದರೆ ಆದರೂ ರೈತರಿಗೆ ಧೈರ್ಯ ತುಂಬುವ ಕೆಲಸ ಆಗುತ್ತಿಲ್ಲ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಬಂದರೂ ಕೇವಲ ಎರಡು ಕಿ.ಮೀ.ದೂರದ ಗ್ರಾಮಗಳಿಗೆ ಭೇಟಿ ನೀಡಿ ರೈತರನ್ನು ಭೇಟಿ ಮಾಡಲಿಲ್ಲ. ಹೀಗಿದ್ದ ಮೇಲೆ ಜಿಲ್ಲಾ ಮಂತ್ರಿಯಾಗಿ ಯಾಕಿರಬೇಕು. ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದಿಲ್ಲ ಏಕೆ ಎಂದು ಪ್ರಶ್ನಿಸಿದರು. ಆನೆಗಳ ಚಲನ ವಲನಗಳ ಬಗ್ಗೆ ಅಧ್ಯಯನ ಮಾಡಿದ ತಜ್ಞರಿದ್ದಾರೆ. ಅವರೊಂದಿ ಚರ್ಚಿಸಿ ಆನೆಗಳು ದಾಳಿ , ಆಹಾರದ ಸಮಸ್ಯೆ ಎಲ್ಲವನ್ನೂ ತಿಳಿದುಕೊಂಡು ಅದಕ್ಕೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುತ್ತಿಲ್ಲ ಎನ್ನುವುದು ಬೇಸರದ ಸಂಗತಿ ಎಂದರು.
ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಕೇವಲ ಟೈಂ ಪಾಸ್ ಮಾಡುತ್ತಿದ್ದಾರೆ. ಅವರ ವರ್ತನೆ ಇದೇ ರೀತಿ ಮುಂದುವರಿದಲ್ಲಿ ಗೋ ಬ್ಯಾಕ್ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಡಿ.ಎಫ್.ಓ ಕಚೇರಿ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆಗಳು ಮತ್ತು ಮಾನವನ ನಡುವಿನ ಸಂಘರ್ಷ ಹೆಚ್ಚಾಗಲು ಅರಣ್ಯ ಇಲಾಖೆಯ ನಿರ್ಲಕ್ಷ ಧೋರಣೆ ಕಾರಣ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.
Leave a comment