ಚಿಕ್ಕಮಗಳೂರು : ಮಂಡ್ಯದಲ್ಲಿ ಡಿಸೆಂಬರ್ 20 ನೇ ತಾರೀಖಿನಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ ಸರ್ವಾನುಮತದಿಂದ ಅಯ್ಕೆಯಾಗಿದ್ದಾರೆ. ಗೊ,ರು,ಚ ಎಂದೇ ನಾಡಿನಾದ್ಯಂತ ಚಿರಪರಿಚಿತರಾಗಿರುವ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಗೊಂಡೇದಹಳ್ಳಿಯ 96 ವಯಸ್ಸಿನ ಗೊ,ರು,ಚ ಶಿಕ್ಷಕರಾಗಿ ವೃತ್ತಿ ಆರಂಭಿಸಿ ವಾರ್ತಾ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು.
ತರೀಕೆರೆ ತಾಲ್ಲೂಕಿನಿಂದ ಆರಂಭವಾದ ಸಾಹಿತ್ಯ, ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯ ನಾಡಿನಾದ್ಯಂತ ತಲುಪಿವೆ. 1967 ರಲ್ಲಿ ತರೀಕೆರೆಯಲ್ಲಿ ನಡೆದ “ವಿಶ್ವ ಜಾನಪದ ಸಮ್ಮೇಳನದ ರೂವಾರಿಗಳಾಗಿದ್ದ ಇವರ ಜೊತೆಗೆ ಜಾನಪದ ಗಾರುಡಿಗ ಕೆ.ಆರ್. ಲಿಂಗಪ್ಪರವರ ಶ್ರಮದಿಂದ ತಂದ ಜಾನಪದ ಅಕರ ಗ್ರಂಥ ” ಹೊನ್ನ ಬಿತ್ತೇವು ಹೊಲಕ್ಕೆಲ್ಲಾ” ಒಂದು ದಾಖಲೆಯಾಗಿದೆ. ನಾಡಿನಲ್ಲಿ ದೊರೆಯಬಹುದಾದ ಎಲ್ಲಾ ಪ್ರಶಸ್ತಿಗಳನ್ನು ಮೂಡಿಗೆರಿಸಿಕೊಂಡಿರುವ ಇವರು ಚಿಕ್ಕಮಗಳೂರು ಜಿಲ್ಲೆಯ ಸಾಹಿತಿಯಾಗಿ ಸಮ್ಮೇಳನದ ಅಧ್ಯಕ್ಷರಾಗಿರುವುದು ಇದೇ ಪ್ರಥಮ ಎಂಬ ದಾಖಲೆ ಕೂಡ ಸಲ್ಲುತ್ತದೆ.
ವಚನ ಸಾಹಿತ್ಯ, ಜಾನಪದ ಸಾಹಿತ್ಯದಲ್ಲಿ ಜೀವಮಾನವನ್ನು ಬೀಸೆಕಲ್ಲಿನಂತೆ ಜೀವನವನ್ನು ಸವೆಸಿರುವ ಇವರು ಅನೇಕ ಗ್ರಂಥಗಳನ್ನು ತಂದಿದ್ದು ಸಾಕ್ಷಿಕಲ್ಲು ಮತ್ತು ಬೆಳ್ಳಕ್ಕಿ ಹಿಂಡು ಬೆದ್ಯರವೋ ಹಾಗೂ ಬೆಂಗಳೂರಿನಿಂದ ಗೊಂಡೇದಹಳ್ಳಿ ಯವರೆಗೆ ಇವರ ಜೀವನ ಕಥನ ಸಾಕ್ಷಿಗುಡ್ಡೆಗಳು.
ರಾಜ್ಯ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಪರಿಷತ್ ಹಳ್ಳಿ,ಹಳ್ಳಿ,ಮನೆ,ಮನೆ ತಲುಪಿದ್ದು ಕೂಡ ದಾಖಲೆ. 96 ವಯಸ್ಸಿನ ಗೊ,ರು,ಚ ಸಭೆಯಲ್ಲಿ ಮಾತನಾಡಲು ನಿಂತರೆ ಕಂಚಿನ ಕಂಠಕ್ಕೆ ಎಲ್ಲರೂ ತಲೆಬಾಗಿ ಕೈ ಮುಗಿಯುತ್ತಾರೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಯಾರಾಗುತ್ತಾರೆ ಎಂಬ ವಿವಾದಕ್ಕೆ ತೆರೆ ಎಳೆಯಲು ಅರ್ಹ ಸಮರ್ಥ, ಹಿರಿಯ ವಿದ್ವಾಂಸರಾದ ಗೂ,ರು,ಚ ಅಯ್ಕೆ ಸಮರ್ಥವಾಗಿದೆ.
Leave a comment