ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿನಯ್ ಬಿ.ಕೆ. ಎಂಬವರು ಈ ವಂಚನೆಗೆ ಒಳಗಾದ ದುರ್ದೈವಿ. ಇವರಿಗೆ ಶೇರು ಮಾರುಕಟ್ಟೆ ಮತ್ತು ಟ್ರೇಡಿಂಗ್‌ನಲ್ಲಿ ಇದ್ದ ಆಸಕ್ತಿಯನ್ನೇ ಬಂಡವಾಳವಾಗಿಸಿಕೊಂಡ ಸೈಬರ್ ವಂಚಕರು, ಗೂಗಲ್ ಹಾಗೂ ಇನ್‌ಸ್ಟಾಗ್ರಾಂ ಸರ್ಚ್ ಹಿಸ್ಟರಿ ಆಧಾರದ ಮೇಲೆ ಇವರನ್ನು ಸಂಪರ್ಕಿಸಿದ್ದಾರೆ.
ಕಳೆದ ನವೆಂಬರ್ ತಿಂಗಳಲ್ಲಿ 56 Financial Home’ ಎಂಬ ವಾಟ್ಸಾಪ್ ಗ್ರೂಪ್‌ಗೆ ವಿನಯ್ ಅವರನ್ನು ಸೇರಿಸಿಕೊಂಡಿದ್ದ ನಿತಿನ್ ಜೋಶಿ ಎಂಬ ವ್ಯಕ್ತಿ, ಪ್ರತಿದಿನ ಟ್ರೇಡಿಂಗ್ ಲಾಭದ ಬಗ್ಗೆ ಸುಳ್ಳು ಅಪ್‌ಡೇಟ್‌ಗಳನ್ನು ನೀಡುವ ಮೂಲಕ ನಂಬಿಕೆ ಹುಟ್ಟಿಸಿದ್ದಾನೆ.
ಆರೋಪಿಯ ಮಾತನ್ನು ನಂಬಿದ ವಿನಯ್, ಹೆಚ್ಚಿನ ಲಾಭದ ಆಸೆಯಿಂದ ಹಂತ ಹಂತವಾಗಿ ‘AVENIR LLC’ ಹಾಗೂ ‘Bharath own payments app ಗಳ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 2,92,000/- ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ.
ಲಾಭಾಂಶದ ಹಣವನ್ನು ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಅದು ಸಾಧ್ಯವಾಗದಿದ್ದಾಗ ತಾನು ವಂಚನೆಗೆ ಒಳಗಾಗಿರುವುದು ಅವರಿಗೆ ಅರಿವಾಗಿದೆ. ಈ ಬಗ್ಗೆ ವಿನಯ್ ನೀಡಿದ ದೂರಿನ ಮೇರೆಗೆ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಂಚಕರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.
Youth cheated of lakhs of rupees under the lure of dividends
Leave a comment