ಚಿಕ್ಕಮಗಳೂರು: ಕಾಫಿ ತೋಟದ ಕೆಲಸದಿಂದ ಹಿಂತಿರುಗುತ್ತಿದ್ದಾಗ ಕಾರ್ಮಿಕನ ಮೇಲೆ ಕಾಡಾನೆದಾಳಿ ನಡೆಸಿರುವ ಘಟನೆ ನಡೆದಿದೆ. ಮೂಡಿಗೆರೆ ತಾಲ್ಲೂಕಿನ ಬೈದುವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಡಾನೆ ದಾಳಿಯಿಂದ ಕಾರ್ಮಿಕ ದಿನೇಶ್ (೩೭ ವರ್ಷ) ಗಾಯಗೊಂಡಿದ್ದಾರೆ.
ಬೈದುವಳ್ಳಿ ಗ್ರಾಮದ ಮೂರ್ತೇಶ್ ರವರ ತೋಟಕ್ಕೆ ಕೆಲಸಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಮೂಡಿಗೆರೆ ಸಮೀಪದ ಹೆಸಗಲ್ ಗ್ರಾಮದ ದಿನೇಶ್ ಹಾಗೂ ಇತರರು ಮೂರ್ತೇಶ್ ಅವರ ತೋಟದ ಕೆಲಸಕ್ಕೆ ಆಗಮಿಸಿದ್ದರು.
ತೋಟದ ಕೆಲಸ ಮುಗಿಸಿ ನಡೆದುಕೊಂಡು ಬರುತ್ತಿದ್ದಾಗ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ಹಿಂಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ದಿನೇಶ್ ಅವರನ್ನು ಕಾಡಾನೆ ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ನಂತರ ಕೆಲ ಹೊತ್ತು ಅಲ್ಲಿಯೇ ನಿಂತು ವಾಪಾಸ್ಸಾಗಿದೆ.
ಕಾಡಾನೆ ಎತ್ತಿ ಎಸೆದ ರಭಸಕ್ಕೆ ದಿನೇಶ್ ಅವರ ಬೆನ್ನು, ಕುತ್ತಿಗೆ ಮತ್ತು ತಲೆ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಈ ಸಂದರ್ಭದಲ್ಲಿ ತೋಟದ ಮಾಲೀಕ ಮೂರ್ತೇಶ್ ಮತ್ತು ಇತರೆ ಕಾರ್ಮಿಕರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಗಾಯಗೊಂಡ ದಿನೇಶ್ ಅವರನ್ನು ತಕ್ಷಣ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿಗೆ ಕರೆದೊಯ್ಯಲಾಗಿದೆ. ದಿನೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
Wild elephant attacks laborer in Baiduvalli village
Leave a comment