ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ೨ ವರ್ಷದ ಅವಧಿಯಲ್ಲಿ ಒಟ್ಟು ೫೨೯ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ ಬಹಳಷ್ಟು ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಕ್ಕೆ ಬಂದು ೨ ವರ್ಷದಲ್ಲಿ ನುಡಿದಂತೆ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಪೂರೈಸಿದ್ದೇವೆ. ೬ನೇ ಗ್ಯಾರಂಟಿಯಾಗಿ ಭೂಗ್ಯಾರಂಟಿ ಮೂಲಕ ಹೊಸ ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ನೀಡಲಿದ್ದೇವೆ. ಬಡವರ, ಶೋಷಿತರ ಏಳಿಗೆಗಾಗಿ ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಈ ಯೋಜನೆ ಅನುಷ್ಠಾನ ಮಾಡುತ್ತಿದ್ದಾರೆ ಎಂದು ಹೇಳಿದರು.
ಭದ್ರಾ ಉಪಕಣಿವೆ ಯೋಜನೆಯಲ್ಲಿ ಚಿಕ್ಕಮಗಳೂರು ವಿಭಾಗಕ್ಕೆ ದೊರೆಯುವ ಹಣವನ್ನು ಹೊರತುಪಡಿಸಿ ೫೨೯ ಕೋಟಿ ರೂ ಅನುದಾನ ಸರಕಾರ ಒದಗಿಸಿದೆ. ನಗರದ ಜಿಲ್ಲಾಸ್ಪತ್ರೆಗೆ ೭೫ ಲಕ್ಷ ರೂ. ವೆಚ್ಚದ ಮ್ಯಾಮೋಗ್ರಫಿ ಯಂತ್ರವನ್ನು ಅಳವಡಿಸಿದ್ದು, ಅದು ಬ್ರಸ್ಟ್ ಕ್ಯಾನ್ಸರ್ ಪತ್ತೆಗೆ ಸಹಕಾರಿಯಾಗಲಿದೆ. ಆಸ್ಪತ್ರೆ ಆವರಣದಲ್ಲಿ ೨೫ ಲಕ್ಷ ರೂ.ವೆಚ್ಚದಲ್ಲಿ ಸುಲಭ ಶೌಚಾಲಯ, ಸ್ನಾನಗ್ರಹ ನಿರ್ಮಿಸಲಾಗುವುದು. ಬಸವತತ್ವ ಪೀಠದ ಮೂಲಸೌಕರ್ಯಗಳ ಅಭಿವೃದ್ಧಿಗೆ ೫೦ ಲಕ್ಷ ರೂ, ಜಿಲ್ಲಾಧಿಕಾರಿಗಳ ಕಚೇರಿ ಪ್ರಜಾಸೌಧಕ್ಕೆ ೫೬ ಕೋಟಿ ರೂ. ಮಂಜೂರಾತಿ ದೊರೆತಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ೬.೫೦ ಕೋಟಿ ರೂ., ಜಿಲ್ಲಾ ಮುಖ್ಯರಸ್ತೆ ಮತ್ತು ಇತರೆ ರಸ್ತೆಗಳ ಅಭಿವೃದ್ಧಿಗೆ ೪೧.೫ ಕೋಟಿ ರೂ, ಕಳೆದ ವರ್ಷ ನೆರೆ ಹಾವಳಿಯಿಂದ ಹಾನಿಯಾದ ರಸ್ತೆ ಸೇತುವೆ ಅಭಿವೃದ್ಧಿಗೆ ೨೯೦ ಲಕ್ಷ ರೂ, ಜಿಲ್ಲಾ ಗ್ರಾಹಕರ ಆಯೋಗದ ಕಟ್ಟಡದ ನವೀಕರಣ ೩೬.೨೬ ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ನಗರದ ಗ್ರಾಮೀಣ ಬಸ್ ನಿಲ್ದಾಣದ ಉನ್ನತೀಕರಣಕ್ಕೆ ೧೯.೮೭ ಕೋಟಿ ರೂ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರಸ್ತೆ, ಸೇತುವೆ, ಚರಂಡಿ ಕಾಮಗಾರಿಗೆ ೧೦ ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಎಸ್ಸಿಎಸ್ಟಿ ಕಾರ್ಯಕ್ರಮದಡಿ ೧.೫೦ ಕೋಟಿ, ಗ್ರಾಮೀಣ ರಸ್ತೆ ನಿರ್ವಹಣೆಗೆ ೮೮ ಲಕ್ಷ ರೂ, ಜಲಸಂಪನ್ಮೂಲ ಇಲಾಖೆಗೆ ವಿವಿಧ ಜಲಮೂಲಗಳ ಅಭಿವೃದ್ಧಿಗೆ ೨೫ ಕೋಟಿರೂ ಅನುಮೋದನೆ ನೀಡಲಾಗಿದೆ. ಭದ್ರಾ ಉಪಕಣಿವೆ ಯೋಜನೆ ಅಡಿ ಕೆರೆ ತುಂಬಿಸುವ ಕಾಮಗಾರಿಗೆ ೪೦೭.೫೦ ಕೋಟಿ ರೂ ಮೊತ್ತಕ್ಕೆ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಅಭಿವೃದ್ಧಿಗೆ ಈ ಹಿಂದೆ ೩೩೭.೨೨ ಲಕ್ಷ ಹಣ ಬಿಡುಗಡೆಯಾಗಿತ್ತು ಬಾಕಿ ೧.೯೩ ಕೋಟಿ ಹಣದ ಜತೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯವಿರುವ ೫ ಕೋಟಿರೂಗಳನ್ನು ಸಿಎಸ್‌ಆರ್ ನಿಧಿಯಡಿ ನೀಡಲು ಜಿಲ್ಲಾ ಸಚಿವರು ಒಪ್ಪಿದ್ದು, ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಕಲ್ಯಾಣ ನಗರದ ಒಳಾಂಗಣ ಕ್ರೀಡಾಂಗಣದ ಬಾಸ್ಕೆಟ್‌ಬಾಲ್ ಅಂಕಣಕ್ಕೆ ಮರದ ನೆಲಹಾಸು ಅಳವಡಿಸುವ ಕಾಮಗಾರಿಗೆ ೭೫ ಲಕ್ಷ ರೂ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ನಗರದ ವಿವಿಧ ರಸ್ತೆ ಡಾಂಬರೀಕರಣಕ್ಕೆ ೧೦ ಕೋಟಿ ರೂ ವಿಶೇಷ ಅನುದಾನ ಬಂದಿದೆ. ಪ್ರಗತಿ ಕಾಲೋನಿ ಯೋಜನೆ ಅಡಿ ೨೫೦ ಲಕ್ಷ ರೂ, ಮಲ್ಲೇನಹಳ್ಳಿ ಮೊರಾರ್ಜಿ ಶಾಲಾ ಕಟ್ಟಡಕ್ಕೆ ೨೨ ಕೋಟಿ ರೂ., ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು ೫೨೯ ಕೋಟಿ ರೂ.ಗಳ ಕಾಮಗಾರಿಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಕ್ಷೇತ್ರದ ೨೧೬ ಗ್ರಾಮಗಳ ಫಲಾನುಭವಿಗಳಿಗೆ ೯೪ಡಿ ಅಡಿ ಕಂದಾಯ ಗ್ರಾಮ ಹಾಗೂ ಉಪಗ್ರಾಮಗಳ ಘೋಷಣೆಯೊಂದಿಗೆ ಹಕ್ಕುಪತ್ರ ನೀಡಲಾಗುವುದು ಎಂದರು. ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿ, ಚಿಕ್ಕಮಗಳೂರು ಕ್ಷೇತ್ರಕ್ಕೆ ಪಂಚಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ ೩೨೭ ಕೋಟಿ ರೂ ವಿನಿಯೋಗಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಮಹಡಿಮನೆ ಸತೀಶ್, ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ಮುಖಂಡರಾದ ತನೋಜ್, ಮಲ್ಲೇಶಸ್ವಾಮಿ, ಪ್ರವೀಣ್, ಸಾದಬ್ ಆಲಂ ಖಾನ್, ರೂಬಿನ್‌ಮೊಸೆಸ್ ಇದ್ದರು.
Various development works worth Rs. 596 crore have been undertaken.
Leave a comment