ಚಿಕ್ಕಮಗಳೂರು : ದತ್ತ ಜಯಂತಿ ವೇಳೆ ಗೋರಿ ಸ್ಥಳಾಂತರಿಸುವ ಹೇಳಿಕೆ ನೀಡಿರುವ ಸಿ.ಟಿ ರವಿಗೆ ಕೆಪಿಸಿಸಿ ವಕ್ತಾರ ಎಚ್.ಎಚ್ ದೇವರಾಜ್ ವಿವಾದಿತ ಸ್ಥಳದಲ್ಲಿರುವ ಗೋರಿಗಳನ್ನು ಮುಟ್ಟಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿ.ಟಿ ರವಿ ಏನು ಮಾತನಾಡುತ್ತಿದ್ದಾರೆ ಎಂಬುದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಮುಸ್ಲಿಮರಿಂದ ಅಸಹಿಷ್ಣುತೆ ಮತ್ತು ಭಯೋತ್ಪಾದನೆ ಬಗ್ಗೆ ಮಾತನಾಡುವ ಮೊದಲು ಯೋಚನೆ ಮಾಡಿ ಮಾತನಾಡಿ ದತ್ತಪೀಠ ವಿವಾದವನ್ನು ಬಗೆಹರಿಸಲು ನೀವು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೀರಿ ಎಂಬುದನ್ನು ಜನರಿಗೆ ಮೊದಲು ತಿಳಿಸಿ, ವಾಚಾಮ ಗೋಚಾರವಾಗಿ ರಾಜ್ಯ ಸರ್ಕಾರವನ್ನು ಬಯ್ಯುವುದು ಮಾತ್ರ ನಿಮ್ಮ ಕೆಲಸ ಎಂದು ಕಿಡಿ ಕಾರಿದರು.
ದತ್ತ ಜಯಂತಿ ವೇಳೆಯಲ್ಲಿ ನೀವು ಮಾಡುತ್ತಿರುವ ಆಚರಣೆಗಳು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದು, ನ್ಯಾಯಾಂಗ ನಿಂದನೆ ಮಾಡುತ್ತಿದ್ದೀರಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಸಿಎಂ ಹಾಗೂ ಡಿಸಿಎಂ ಜೊತೆ ಚರ್ಚಿಸಿ ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಅವರು ಸಂಘ ಪರಿವಾರ ದಿನೇ ದಿನೇ ತನ್ನ ಶಕ್ತಿ ಕಳೆದುಕೊಳ್ಳುತ್ತಿದೆ, ದತ್ತ ಜಯಂತಿ ಉತ್ಸವ ಕ್ಷಿಣಿಸುತ್ತಿದ್ದು ಜನರು ನಿಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ದತ್ತಪೀಠ ವ್ಯವಸ್ಥಾಪನ ಸಮಿತಿಯ ಸದಸ್ಯರನ್ನು ಬದಲಾವಣೆ ಮಾಡುತ್ತೇವೆ. ರಾಜ್ಯಮಟ್ಟದಲ್ಲಿ ಈ ಬಗ್ಗೆ ಮುಖಂಡರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.
ಮತೀಯ ಶಕ್ತಿಗಳು ಸಮಾಜ ಹೊಡೆಯುವ ಕೆಲಸ ಮಾಡುತ್ತಿದ್ದು ನೀವು ಪ್ರತಿಪಾದಿಸುತ್ತಿರುವ ಹಿಂದೂ ಧರ್ಮವೇ ಬೇರೆ ನಾವು ಪ್ರತಿಪಾದಿಸುವ ಧರ್ಮ ಸಂವಿಧಾನ. ನಮ್ಮನ್ನು ಸಂವಿಧಾನ ರಕ್ಷಿಸುತ್ತದೆ ಹೊರತು, ಧರ್ಮವಲ್ಲ ಬಾಯಿಗೆ ಬಂದಂತೆ ಮಾತನಾಡ ಬೇಡಿ, ಬೊಗಳೆ ಬಿಡುವುದನ್ನು ಮೊದಲು ನಿಲ್ಲಿಸಿ ಜನರ ದಿಕ್ಕು ತಪ್ಪಿಸಬೇಡಿ. ಉದ್ರೇಕಕಾರಿ ಭಾಷಣ ನಿಲ್ಲಿಸಿ ಎಂದು ಚಕ್ರವರ್ತಿ ಸೂಲಿಬೆಲೆ ವಿರುದ್ಧ ವಾಗ್ದಾಳಿ ನಡೆಸಿದರು.
ಹೊರಗಿನಿಂದ ಬಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಂಕಿ ಹಚ್ಚುವುದನ್ನ ಬಿಡಿ ಇದೇ ರೀತಿ ಮುಂದುವರೆದರೆ ಪ್ರಮೋದ್ ಮುತಾಲಿಕ್ ಅಂಥವರನ್ನು ಬಂಧಿಸಲು ಮುಂದಿನ ದಿನಗಳಲ್ಲಿ ಒತ್ತಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ನೀತಿ ನಿಯಮ ಬದ್ಧತೆ ಇದೆ. ಧೈರ್ಯವಿದ್ದರೆ ಆರ್.ಎಸ್.ಎಸ್ ಹಾಗೂ ಹಿಂದೂ ಸಂಘಟನೆಗಳು ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ 5 ಗ್ಯಾರಂಟಿಗಳನ್ನು ತಿರಸ್ಕರಿಸಿ ಹಾಗೂ ಅದನ್ನು ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.
Leave a comment